ಬೆಂಗಳೂರು:ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು 2020ರಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಕೈಗೊಂಡಿತು.
ಪುತ್ರ ವಿಜಯೇಂದ್ರಗೂ ಸಂಕಷ್ಟ: ಈ ತೀರ್ಮಾನದ ಬೆನ್ನಲ್ಲೇ ಯಡಿಯೂರಪ್ಪ ಮಾತ್ರವಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೂ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ಅವರು ಬಿಡಿಎ ಅಪಾರ್ಟ್‌ಮೆಂಟ್ ನಿರ್ಮಾಣ ಟೆಂಡರ್‌ವೊಂದರಲ್ಲಿ ರಾಮಲಿಂಗಂ ಕನ್ಸಸ್ಟ್ರಕ್ಷನ್ ಕಂಪೆನಿಯಿಂದ 12 ಕೋಟಿ ರೂ. ಲಂಚ ಪಡೆದಿದ್ದರು ಎಂದು ಆರೋಪಿಸಿ ಟಿ.ಜೆ.ಅಬ್ರಾಹಂ ದೂರು ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಬೇಕು ಎಂದು ನ್ಯಾಯಾಲಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದರು.
ಇದೀಗ ಕಾಂಗ್ರೆಸ್ ಸರ್ಕಾರ ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿರುವ ನಿರ್ಣಯ ಹಿಂಪಡೆಯಬೇಕು. ಜೊತೆಗೆ, ಭ್ರಷ್ಟಾಚಾರ ಪ್ರತಿಬಂಧಿತ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. ಈ ಮೂಲಕ ಪ್ರಕರಣದಲ್ಲಿ 2ನೇ ಆರೋಪಿಯಾದ ವಿಜಯೇಂದ್ರಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.