ಬೆಂಗಳೂರು:2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ - 3 ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 2ರಿಂದ 9ರವರೆಗೆ ನಡೆಯಲಿದೆ. ಈ ಪರೀಕ್ಷೆಗೆ ಒಟ್ಟು 97,933 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ನೋಂದಾಯಿತರಲ್ಲಿ 67,716 ಬಾಲಕರು ಮತ್ತು 30,217 ಬಾಲಕಿಯರಿದ್ದಾರೆ. ಈ ಪೈಕಿ 459 ಮಂದಿ ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಇನ್ನಷ್ಟು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮತ್ತೆ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮರಾಗಳ ಮೂಲಕ ನಿಗಾ ವಹಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳ ಹಾಗೂ ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಮತ್ತು ತಾಲೂಕು ಹಂತದ ವಿಚಕ್ಷಣಾ ದಳಗಳನ್ನು ಆಯಾ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ: ಕಿರಿಯ ಆರೋಗ್ಯ ಸಹಾಯಕರ ನೇಮಕಾತಿಗೆ ಅಧಿಸೂಚನೆ - Junior Health Assistant