ಕರ್ನಾಟಕ

karnataka

ETV Bharat / state

ಮುಡಾ ಹಗರಣ: ಎಲ್ಲ ದಾಖಲೆಗಳನ್ನ ನ್ಯಾಯಾಲಯಕ್ಕೆ ನೀಡುತ್ತೇನೆ - ಸ್ನೇಹಮಯಿ ಕೃಷ್ಣ

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಸಂಸ್ಥೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

snehamayi-krishna
ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Nov 25, 2024, 5:52 PM IST

Updated : Nov 25, 2024, 6:19 PM IST

ಮೈಸೂರು :ಲೋಕಾಯುಕ್ತ ಸಂಸ್ಥೆಯವರೇ ಮುಡಾ ಹಗರಣದ ಆರೋಪಿಗಳೊಂದಿಗೆ ಶಾಮೀಲಾಗಿ ಆರೋಪಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಎಲ್ಲ ಮಾಹಿತಿಗಳನ್ನ ಹಾಗೂ ದಾಖಲಾತಿಗಳನ್ನ ಮಾನ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು ದಾಖಲೆಗಳನ್ನ ಸಲ್ಲಿಸಿ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬದ ತನಿಖೆಯ ಮಧ್ಯಂತರ ವರದಿಯನ್ನ ಮೈಸೂರು ಲೋಕಾಯುಕ್ತ ಎಸ್​ಪಿ ಉದೇಶ್‌ ಅವರಿಂದು ನ್ಯಾಯಾಲಯಕ್ಕೆ ನೀಡಲಿದ್ದಾರೆ. ನಾಳೆ ಹೈಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆಯಿದೆ.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಮಾತನಾಡಿದರು (ETV Bharat)

ಈ ಕುರಿತು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೂನ್ 28 ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ಲೋಕಾಯುಕ್ತದವರು ಸರ್ಚ್​ ವಾರಂಟ್​ ಕೊಟ್ಟಿದ್ದರು. ಅದು, ಮೈಸೂರಿಗೆ 29 ರಂದು ತಲುಪಿದೆ. ಈ ವಿಚಾರವನ್ನ ಹಿಂದಿನ ಎಸ್​ಪಿ ಅವರು ಸಚಿವ ಬೈರತಿ ಸುರೇಶ್ ಅವರಿಗೆ ತಿಳಿಸಿದ್ದರಿಂದ ಅವರು ಜುಲೈ 1 ರಂದು ದಿಢೀರ್ ಎಂದು ಮೈಸೂರಿಗೆ ಭೇಟಿ ನೀಡಿ, ಮುಡಾ ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ನಂತರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರಿಂದ ಲೋಕಾಯುಕ್ತದವರು ಇದೇ ಕಾರಣಕ್ಕೆ ತನಿಖೆ ನಡೆಸದೆ ಆ ಪ್ರಕರಣವನ್ನ ಮುಚ್ಚಿಹಾಕಿದ್ದಾರೆ. ಇದೆಲ್ಲಾ ಗಮನಿಸಿದಾಗ ಲೋಕಾಯುಕ್ತ ಸಂಸ್ಥೆಯೇ ಆರೋಪಿಗಳೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿಹಾಕಿರುವುದು ಕಂಡು ಬರುತ್ತದೆ ಎಂದು ಆರೋಪಿಸಿದ್ದಾರೆ.

ತನಿಖೆಯ ಬಗ್ಗೆ ಕೆಲವು ಮಾಹಿತಿ ಮತ್ತು ದಾಖಲಾತಿಗಳನ್ನ ಮಾನ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರುತ್ತೇನೆ. ಇದೆಲ್ಲವನ್ನ ಗಮನಿಸಿದ ಉಚ್ಛ ನ್ಯಾಯಾಲಯ ಪ್ರಕರಣವನ್ನ ಸಿಬಿಐಗೆ ವಹಿಸಿ ಆದೇಶಿಸಲಿದೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.

ಸಚಿವರ ಹೇಳಿಕೆಗೆ ತಿರುಗೇಟು : ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಮುಡಾ ಒಂದು ಹಗರಣವೇ ಅಲ್ಲ, ಉಪ ಚುನಾವಣೆಗೋಸ್ಕರ ಸುಮ್ಮನೆ ಆರೋಪ ಮಾಡಿದ್ರು ಎಂದು ಹೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಾವು ಸುಳ್ಳು ಆರೋಪ ಮಾಡಿದರೆ, ಸಿದ್ದರಾಮಯ್ಯ ಏಕೆ ತಮ್ಮ ಪತ್ನಿ ಹೆಸರಿನ ನಿವೇಶನಗಳನ್ನ ವಾಪಸ್​​​ ಕೊಡುತ್ತಿದ್ದರು. ಇದರ ಬಗ್ಗೆ ಅವರು ಸ್ಪಷ್ಟೀಕರಣ ಕೊಡಬೇಕು. ಅವರು ಮಾಡಿರುವುದು ಅಕ್ರಮ ಎಂದು ನಿವೇಶನ ವಾಪಾಸ್​ ಕೊಟ್ಟಿದ್ದಾರೆ. ಇದೆಲ್ಲವನ್ನು ಗಮನಿಸಿ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ :ಸಿಎಂ ಮತ್ತು ಕುಟುಂಬಸ್ಥರ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ: ವಿಚಾರಣೆ ಎದುರಿಸಿದ ಸ್ನೇಹಮಯಿ ಕೃಷ್ಣ

Last Updated : Nov 25, 2024, 6:19 PM IST

ABOUT THE AUTHOR

...view details