ಕರ್ನಾಟಕ

karnataka

By ETV Bharat Karnataka Team

Published : Mar 7, 2024, 11:33 AM IST

Updated : Mar 7, 2024, 3:53 PM IST

ETV Bharat / state

ಶಿವರಾತ್ರಿ ಜಾತ್ರೆ: ಮಾದಪ್ಪನ ಬೆಟ್ಟದಲ್ಲಿ 4 ಲಕ್ಷ ಲಾಡು ರೆಡಿ, ದೇಶಕ್ಕೆ ಒಳ್ಳೆಯದಾಗಲೆಂದು ಅಜ್ಜಿ ಪಾದಯಾತ್ರೆ

ಮಹಾಶಿವರಾತ್ರಿ ಹಿನ್ನೆಲೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.

Chamarajanagar news
ಶಿವರಾತ್ರಿ ಜಾತ್ರೆ

ಶತಾಯುಷಿ ಅಜ್ಜಿ

ಚಾಮರಾಜನಗರ:ನಾಳೆಶಿವನ ಭಕ್ತರ ಪವಿತ್ರ ಹಬ್ಬ ಮಹಾಶಿವರಾತ್ರಿ.ಈ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಕನಕಪುರ, ಬೆಂಗಳೂರು, ರಾಮನಗರ, ಚನ್ನಪಟ್ಟಣ ಕಡೆಯಿಂದ ಕಾವೇರಿ ಸಂಗಮವನ್ನು ದಾಟಿ ಲಕ್ಷಾಂತರ ಮಂದಿ ಭಕ್ತರು ಬೆಟ್ಟಕ್ಕೆ ಬಂದಿದ್ದು ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಿಂದಲೂ ಭಕ್ತಸಾಗರವೇ ಹರಿದು ಬಂದಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಭಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ಎತ್ತ ನೋಡಿದರೂ ಮಾದಪ್ಪನ ಜಯಘೋಷಗಳು ಮಾರ್ದನಿಸುತ್ತಿವೆ.

ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಹಿತಿ

4 ಲಕ್ಷ ಲಾಡು ಸಿದ್ಧ:ತಿರುಪತಿಯಂತೇ ಮಲೆ ಮಹದೇಶ್ವರನ ಲಾಡು ಪ್ರಸಾದಕ್ಕೂ ಬೇಡಿಕೆ ಇರುವ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರವು ಈಗಾಗಲೇ 4 ಲಕ್ಷ ಲಾಡುಗಳನ್ನು ತಯಾರಿಸಿದೆ. ಲಾಡು ಪ್ರಸಾದ ಮಾರಾಟವಾಗುತ್ತಿದ್ದಂತೆ ಮತ್ತೆ ಪ್ರಸಾದ ತಯಾರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಲಾಡು ಪ್ರಸಾದ ಮಾರಾಟ ಈ ಬಾರಿ 5 ಲಕ್ಷ ಮೀರುವ ನಿರೀಕ್ಷೆ ಇದೆ.

ಮಡಕೆ ನೀರು-ಮಾತೃ ಕುಟೀರ:ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ರಘು ಮೊದಲ ಬಾರಿಗೆ ಕ್ಷೇತ್ರದ ಅಲ್ಲಲ್ಲಿ ನೀರಿನ ಮಡಕೆಗಳನ್ನು ಇರಿಸಿದ್ದು, ಭಕ್ತರು ಈ ಬಾರಿ ಟ್ಯಾಂಕ್​ ನೀರಿನ ಜೊತೆಗೆ ಮಡಕೆ ನೀರನ್ನು ಕುಡಿಯಬಹುದಾಗಿದೆ. ತಾಯಂದಿರು ಕೂಡ ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಯಾವುದೇ ತೊಂದರೆಯಾಗದಂತೆ ತೆಂಗಿನ ಗರಿಗಳನ್ನು ಬಳಸಿಕೊಂಡು ಹಾಲುಣಿಸುವ ಕೇಂದ್ರ ತೆರೆದಿದ್ದು ಮಾತೃ ಕುಟೀರ ಎಂದು ಹೆಸರಿಡಲಾಗಿದೆ. ಇದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ನಿರಂತರ ದಾಸೋಹದ ವ್ಯವಸ್ಥೆ:ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತಾಳು ಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದವರೆಗೆ ಟ್ಯಾಂಕ್​ಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು 10 ಕಡೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶ್ರೀ ಕ್ಷೇತ್ರದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದು ಬಾರಿಗೆ 2 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಹಳೆ ದಾಸೋಹದ ಮುಂಭಾಗ ನಿರಂತರ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಎಸ್​ಆರ್​ಟಿಸಿ ವತಿಯಿಂದ 500 ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟ ನಿಂತರೆ ದುರಸ್ತಿ ಪಡಿಸಲು 15 ಜನ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ. ತಾಳು ಬೆಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತಾಳುಬೆಟ್ಟ ಹಾಗೂ ಶಂಕಮ್ಮನ ನಿಲಯ ಸಮೀಪ 100 ಮೊಬೈಲ್ ಶೌಚಾಲಯವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 12ರ ಬೆಳಗಿನ ಜಾವ 6 ಗಂಟೆಯವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು ದ್ವಿಚಕ್ರ ವಾಹನ ಸವಾರರಿಗೆ ತೆರಳಲು ನಿರ್ಬಂಧ ಹೇರಿರುವುದರಿಂದ ಕೌದಳ್ಳಿ ಗ್ರಾಮದ ಖಾಸಗಿ ಲೇಔಟ್​ನಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್​ನಿಂದ ಮಲೆಮಾದೇಶ್ವರ ಬೆಟ್ಟಕ್ಕೆ ತೆರಳಲು 10 ವಿಶೇಷ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.

ಶಿವರಾತ್ರಿ ಜಾತ್ರಾ‌ ಮಹೋತ್ಸವದ ದಿನದ ವಿಶೇಷತೆ:ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್​ 7ರಿಂದ ಪ್ರಾರಂಭವಾಗಿದ್ದು, ಮಾದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. 8ರಂದು ಮಹಾಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು, 9 ರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು, 10 ರಂದು ಬೆಳಗ್ಗೆ ಮಹಾರಥೋತ್ಸವ ಜರುಗಲಿದೆ. ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ. ಒಟ್ಟಿನಲ್ಲಿ ಅಬಾಲವೃದ್ಧರಿಂದ ಲಕ್ಷಾಂತರ ಮಂದಿ ಭಕ್ತರು ಮಾದಪ್ಪ‌ನ ದರ್ಶನಕ್ಕೆ ಹರಿದು ಬರುತ್ತಿದ್ದಾರೆ.

ಶತಾಯುಷಿ ಅಜ್ಜಿ ಪಾದಯಾತ್ರೆ :102 ವರ್ಷದ ಅಜ್ಜಿಯೊಬ್ಬರು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದು, ದೇಶಕ್ಕೆ ಒಳ್ಳೆಯದಾಗಬೇಕು, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಬೇಕೆಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಜ್ಜಿ ಮಾತು ಕೇಳಿದ ಉಳಿದ ಭಕ್ತರು ಚಪ್ಪಾಳೆ ತಟ್ಟಿ ಸೂಪರ್ ಅಜ್ಜಿ ಎಂದು ಸಂತಸಗೊಂಡಿದ್ದಾರೆ. ಶತಾಯುಷಿ ಅಜ್ಜಿ ಯಾವ ಊರಿನವರು ಎಂಬ ಮಾಹಿತಿ ಇಲ್ಲಾ. ಆದರೆ ಯುವಕರಂತೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಮಹಾಶಿವರಾತ್ರಿ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ 1,500 ಹೆಚ್ಚುವರಿ ವಿಶೇಷ ಬಸ್​ ವ್ಯವಸ್ಥೆ

Last Updated : Mar 7, 2024, 3:53 PM IST

ABOUT THE AUTHOR

...view details