ಧಾರವಾಡ: "ಸದ್ಗುರು ಅವರು ಶಿವರಾತ್ರಿಯಂದು ದೇಶದ ರಾಜಕೀಯ ಕುರಿತು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ಮಾತನಾಡುವುದಾದರೆ ಬಹಿರಂಗವಾಗಿ ಚರ್ಚಿಸಲಿ. ಶಿವರಾತ್ರಿಯಂದು ರಾಜಕೀಯ ವಿಚಾರ ಚರ್ಚಿಸಿದ್ದು ಎಷ್ಟು ಸರಿ, ಎಷ್ಟು ತಪ್ಪು ಅನ್ನೋದನ್ನು ಅವರೇ ತಿಳಿದುಕೊಳ್ಳಬೇಕು" ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸದ್ಗುರುಗಳಿಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ನಾನೂ ಕೂಡ ಅವರ ಅಭಿಮಾನಿ. ಅಭಿಮಾನಿಗಳಿದ್ದಾಗ ಅವರು ಮಾತನಾಡುತ್ತಾರೆ. ಶಿವರಾತ್ರಿ ಹಬ್ಬದಲ್ಲಿ ರಾಜಕೀಯ ವಿಚಾರ ಮಾತನಾಡಬಾರದಿತ್ತು. ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು ಸರಿಯಲ್ಲ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದರು.
ಗೃಹ ಲಕ್ಷ್ಮಿ ಹಣ ವಿಳಂಬದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಟೀಕೆಗೆ, "ರಾಜ್ಯ ಸರ್ಕಾರ ದಿವಾಳಿ ಆಗಿದೆ ಅಂತ ಹೇಳುವ ಜೋಶಿ ಅವರು ಮೊದಲು ಕೇಂದ್ರ ಸರ್ಕಾರ ಏನಾಗಿದೆ ಎಂಬುದನ್ನು ಹೇಳಬೇಕು. ಅವರು ಈ ರಾಜ್ಯದವರಿದ್ದಾರೆ. ಪ್ರತೀಸಾರಿ ರಾಜ್ಯ ಸರ್ಕಾರಕ್ಕೆ ಆಟ್ಯಾಕ್ ಮಾಡಿ ಹೋಗ್ತಾರೆ. ಕೇಂದ್ರ ಸರ್ಕಾರದಿಂದ ಇಷ್ಟು ಬಜೆಟ್ ಮಂಡನೆಯಾಗಿದ್ದು, ಕರ್ನಾಟಕಕ್ಕೆ ಧಾರವಾಡ ಜಿಲ್ಲೆಗೆ ಏನೂ ಅನುದಾನ ತಂದಿದ್ದಾರೆ ಅನ್ನೋದನ್ನು ಚರ್ಚೆ ಮಾಡಲಿ. ಎರಡು ತಿಂಗಳು ದುಡ್ಡು ಹಾಕಿಲ್ಲ ಅಂದ್ರೆ ದಿವಾಳಿ ಆಗಿದೆ ಅಂತ ಹೇಳುವ ಅವರು, ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ಮಾಡ್ತಾರಾ" ಪ್ರಶ್ನಿಸಿದರು.