ಚಿಕ್ಕೋಡಿ (ಬೆಳಗಾವಿ): ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬಾಣಂತಿಯರು ಬಡವರು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಔಷಧಿ ದೊರೆಯಬೇಕು. ಮೆಡಿಕಲ್ ಮಾಫಿಯಾದಲ್ಲಿ ಸರ್ಕಾರ ಸಿಲುಕಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದರು.
ಅವರು ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿರುವ ಹೊರರೋಗಿ ಮತ್ತು ಒಳ ರೋಗಿಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ರಾಜ್ಯದ ಜನರಿಗೆ ಉತ್ತಮ ಗುಣಮಟ್ಟದ ಔಷಧಿ ದೊರೆಯುತ್ತಿಲ್ಲ. ಆರ್ಎಲ್ಐವಿ ಕೊಟ್ಟ ನಂತರ ರೋಗಿಗಳ ಕಿಡ್ನಿ ವೈಫಲ್ಯವಾಗಿ, ಅಂಗಾಂಗಗಳು ನಿಷ್ಕ್ರಿಯವಾಗಿ ಸಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ಭೇಟಿ ನೀಡಿದ ಬಳಿಕ ಆರೋಗ್ಯ ಸಚಿವರು ಹೋಗಿದ್ದಾರೆ. ಅದರ ಬಳಿಕವೂ ರಾಜ್ಯದಲ್ಲಿ ಸಾವುಗಳು ಸಂಭವಿಸುತ್ತಿವೆ".
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ. (ETV Bharat) "ಸರ್ಕಾರಕ್ಕೆ ಪ್ರಜ್ಞೆ ಇದ್ದರೆ, ಡ್ರಗ್ ಮಾಫಿಯಾದಿಂದ ಹೊರ ಬರಲಿ. ಔಷಧಿ ಟೆಂಡರ್ ನೀಡುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ. ಬಾಣಂತಿಯರ ಸಾವಿನ ಕುರಿತು ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲಿ ಈ ಪ್ರಕರಣದ ತನಿಖೆ ಆಗಬೇಕು" ಎಂದು ಅಶೋಕ್ ಒತ್ತಾಯಿಸಿದರು.
ಬಾಣಂತಿಯರ ಸಾವಿನ ಕುರಿತು ನಿಲುವಳಿ ಸೂಚನೆ ತರಲು ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಸದನದಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಬಡವರ ಸಾವಿಗೆ, ಬಾಣಂತಿಯರ ಸಾವಿಗೆ ನ್ಯಾಯ ಸಿಗಬೇಕು ಎಂದು ಅಶೋಕ್ ಆಗ್ರಹಿಸಿದರು.
ಬಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಿಂದ ಮಾಹಿತಿ ಪಡೆದ ಆರ್. ಅಶೋಕ್ ಅವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಬಾಣಂತಿಯರು, ರೋಗಿಗಳ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಔಷಧಿಗಳ ಗುಣಮಟ್ಟ ಹಾಗೂ ವಿತರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಅಲ್ಲದೇ ಕಳೆದ ಆರು ತಿಂಗಳಲ್ಲಿ ಎಷ್ಟು ಬಾಣಂತಿಯರ ಸಾವಾಗಿದೆ ಎಂಬ ವಿವರವನ್ನು ಪಡೆದುಕೊಂಡರು.
ಅಪೌಷ್ಟಿಕತೆಯಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಡಿಹೆಚ್ಒ ಹೇಳಿಕೆ ನೀಡಿದ್ದಾರೆ ಎಂದು ಬಿಮ್ಸ್ ನಿರ್ದೇಶಕರಿಗೆ ಶಾಸಕಿ ಶಶಿಕಲಾ ಜೊಲ್ಲೆ ಪ್ರಶ್ನೆ ಮಾಡಿದರು. ಬಾಣಂತಿಯರ ಸಾವಿನ ಕುರಿತು ರಾಜ್ಯದಲ್ಲಿ ದೊಡ್ಡ ಚರ್ಚೆ ಇದೆ ಎಚ್ಚರದಿಂದಿರಿ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ:ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು: ಆಸ್ಪತ್ರೆಗಳಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ