ಕರ್ನಾಟಕ

karnataka

ETV Bharat / state

15 ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಬಿಬಿಎಂಪಿ ಅಧಿಕಾರಿ, ನೌಕರರಿಂದ ಸಾಮೂಹಿಕ ರಜೆ, ಪ್ರತಿಭಟನೆ

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಲವು ಅಗತ್ಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ
ಪ್ರತಿಭಟನೆ

By ETV Bharat Karnataka Team

Published : Mar 1, 2024, 3:39 PM IST

Updated : Mar 1, 2024, 10:58 PM IST

ಬೆಂಗಳೂರು: 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲಸಕ್ಕೆ ಸಾಮೂಹಿಕ ರಜೆ ಹಾಕುವ ಮೂಲಕ ಬಿಬಿಎಂಪಿ ನೌಕರರು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್​ ನೇತೃತ್ವದಲ್ಲಿ ಮುಖಂಡರಾದ ಸಾಯಿಶಂಕರ್​, ಬಾಬಣ್ಣ ಮತ್ತು ಉಪಾಧ್ಯಕ್ಷರಾದ ಡಾ.ಶೋಭಾ, ಡಿ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿ, ಕಾರ್ಯಾಧ್ಯಕ್ಷ ರುದ್ರೇಶ್ ಸೇರಿದಂತೆ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ನೌಕರರ ಸಂಘ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ನೌಕರರ ಸಂಘ, ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘ, ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘ, ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ದಿ ಸಂಘ, ದಾವಣಗೆರೆ ಮಹಾನಗರಪಾಲಿಕೆ ನೌಕರರ ಸಂಘ, ಮಂಗಳೂರಿನ ಎಸ್.ಕೆ.ಮುನಿಸಿಪಲ್​ ಎಂಪ್ಲಾಯಿಸ್​ ಯೂನಿಯನ್​ ಪದಾಧಿಕಾರಿಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಸಂಘದ ಅಧ್ಯಕ್ಷ ಎ.ಅಮೃತ್​ ರಾಜ್​ ಮಾತನಾಡಿ, "ಕಂದಾಯ ಇಲಾಖೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚಳವಾದರೂ ಅಧಿಕಾರಿಗಳು, ನೌಕರರಿಗೆ ವಿನಾಕಾರಣ ಕಿರುಕುಳ ನೀಡಿ ಅಮಾನತು ಮಾಡಲಾಗುತ್ತಿದೆ. 2022-20ನೇ ಸಾಲಿನಲ್ಲಿ 3,339 ಕೋಟಿ ಮತ್ತು 2023-24ರ ಸಾಲಿನಲ್ಲಿ 3,598 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ" ಎಂದರು.

"ಸಹಾಯಕ ಕಂದಾಯ ಅಧಿಕಾರಿ ಲಕ್ಷ್ಮಿ ವಿರುದ್ಧ 5 ವರ್ಷದಿಂದ ಇಲಾಖಾ ವಿಚಾರಣೆಯ ಅಂತಿಮ ಆದೇಶ ನೀಡದೇ ಅಮಾನತು ಮಾಡಿರುವುದು, ಆರ್.ಆರ್.ನಗರ ವಲಯದಲ್ಲಿ ಆರೋಗ್ಯಧಿಕಾರಿ ದೇವಿಕಾರಾಣಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ಇರುವುದು, ಅಂಗ್ಲ ಭಾಷೆ ಫಲಕಕ್ಕೆ ಅನಾಮಧೇಯರು ಕಲ್ಲು ತೂರಿ ಹಾನಿ ಮಾಡಿದ ಪ್ರಕರಣದಲ್ಲಿ ವಿನಾಕಾರಣದಿಂದ ಹಿರಿಯ ಆರೋಗ್ಯ ಪರಿವಿಕ್ಷಕ ಕೆ.ಎಲ್.ವಿಶ್ವನಾಥ್​ರನ್ನು ಅಮಾನತು ಮಾಡಿರುವುದು ಇಂಥ ಕಿರುಕುಳಕ್ಕೆ ಸಾಕ್ಷಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಕಛೇರಿಯ ಹೊರಗಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಹೆಚ್ಚು. ಆದ್ದರಿಂದ ಬಯೋಮೆಟ್ರಿಕ್ ಮೂಲಕ ಬೆಳಗ್ಗೆ 10 ಗಂಟೆಗೆ ಲಾಗ್ ಇನ್ ಮತ್ತು ಸಂಜೆ 5.30 ಲಾಗ್ ಆಫ್​ ನಿಯಮವನ್ನು ತೆರವುಗೊಳಿಸಬೇಕು. ಬಿಬಿಎಂಪಿ ಕಿರಿಯ ಅಭಿಯಂತರುಗಳ 108 ಹುದ್ದೆಗಳ ನೇಮಕಾತಿ ಮತ್ತು ಮುಂಬಡ್ತಿಗಾಗಿ 10 ಅಧೀಕ್ಷಕ ಅಭಿಯಂತರರ ಹುದ್ದೆಗಳು, 20 ಕಾರ್ಯಪಾಲಕ ಅಭಿಯಂತರ ಹುದ್ದೆಗಳ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ" ಎಂದು ಹೇಳಿದರು.

"ಇಂಜಿನಿಯರಿಂಗ್​ ವಿಭಾಗದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಲು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಕಳುಹಿಸಬೇಕು. ಬಿಬಿಎಂಪಿ ಎ.ಶ್ರೇಣಿಯ ಅಧಿಕಾರಿಗಳು ಮುಂಬಡ್ತಿ ಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಇದು ಸರ್ಕಾರದ ಹಂತದಲ್ಲಿ ವಿಳಂಬವಾಗುತ್ತಿರುವುದರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎ.ಶ್ರೇಣಿ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಅಧಿಕಾರ ನೀಡಬೇಕು. 198 ವಾರ್ಡ್​ಗಳಿಗೆ 225 ವಾರ್ಡ್ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. ಸಕಾಲಕ್ಕೆ ಸಿಬ್ಬಂದಿಗಳ ನೇಮಕ ಮಾಡಬೇಕು" ಎಂದು ಒತ್ತಾಯಿಸಿದರು.

"ಬಿಬಿಎಂಪಿಯಲ್ಲಿ 5,219 ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಮಂಜೂರಾತಿ ನೀಡಿಲ್ಲ. ಬೆಂಗಳೂರು ನಗರದಲ್ಲಿ 1 ಕೋಟಿ 30ಲಕ್ಷ ಜನಸಂಖ್ಯೆ ಇದ್ದು, ಇದರ ಅನುಗುಣವಾಗಿ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಇದ್ದಾಗ ಸುಲಭ ಕಾರ್ಯನಿರ್ವಹಣೆ ಮಾಡಬಹುದಾಗಿದೆ. ಮತ್ತೆ ಕಳೆದ ನಾಲ್ಕು ವರ್ಷಗಳಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಆಚರಣೆ ಮಾಡಿಲ್ಲದಿರುವುದು ಸರಿಯಾದ ಕ್ರಮವಲ್ಲ" ಎಂದು ಅವರು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ 15 ಬೇಡಿಕೆಗಳನ್ನು ಸರ್ಕಾರದ ಜೊತೆಯಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು. ಅಧಿಕಾರಿ ಮತ್ತು ನೌಕರರಿಗೆ ಯಾವುದೇ ಸಮಸ್ಯೆ ಎದುರದಂತೆ ಕ್ರಮ ಕೈಗೊಳ್ಳಲಾಗುವುದು ಪ್ರತಿಭಟನೆಯನ್ನ ಕೈಬಿಡಿ ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಸೋಮಶೇಖರ್​, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್​ ವಿ., ಸಂತೋಷ್​ ಕುಮಾರ್ ನಾಯ್ಕ್, ಸಂತೋಷ್​ ಕುಮಾರ್, ಹೆಚ್.ಬಿ.ಹರೀಶ್ ಪ್ರತಿಭಟನೆಯ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ:ಪ್ರೀಮಿಯಂ ಎಫ್‌ಎಆರ್ ಪದ್ಧತಿಯಿಂದ ಸಾರ್ವಜನಿಕರಿಗೆ ಭಾರಿ ಸಮಸ್ಯೆ: ಎನ್.ಆರ್ ರಮೇಶ್

Last Updated : Mar 1, 2024, 10:58 PM IST

ABOUT THE AUTHOR

...view details