ಬೆಂಗಳೂರು: ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಅನಪೇಕ್ಷಿತವಾಗಿದ್ದು, ಅಪ್ರಸ್ತುತವಾದ ವಿಷಯಗಳಿಗೆ ಕಾರಣವಾಗುತ್ತಿದೆ. ಇದು ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವರ್ಗಾವಣೆ ತಡೆಗೆ ಸಂಸದರೊಬ್ಬರ ಶಿಫಾರಸ್ಸು ಮಾಡಿದ್ದ ಉದ್ಯೋಗಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದ್ದ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಸರ್ಕಾರಿ ನೌಕರರ/ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳು ಉದ್ಯೋಗದಾತ/ ಸಕ್ಷಮ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ ಬೀರುವುದು ನ್ಯಾಯಾಲಯದ ಗಮನಕ್ಕೆ ಬರುತ್ತಿದೆ. ರಾಜಕೀಯ ಪ್ರಭಾವವನ್ನುಂಟು ಮಾಡುವ ಸಾರ್ವಜನಿಕರ ಸೇವೆ ಅಪಮೌಲ್ಯವಾಗಿರಲಿದೆ ಎಂದು ಪೀಠ ತಿಳಿಸಿದೆ.
ವರ್ಗಾವಣೆಗೊಂಡರೂ ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಿರಿಯ ಸಹಾಯಕಿಯಾಗಿದ್ದ ಎಂ. ವೀಣಾ ಎಂಬುವರನ್ನು ಕಡ್ಡಾಯ ನಿವೃತ್ತಿ ಆದೇಶ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ಮಾಡಿದೆ.
ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಾಲಯದ ಮುಂದೆ ಬರುವವರು ಕಳಂಕರಹಿತ ನಡವಳಿಕೆ ಹೊಂದಿರಬೇಕು. ಆದರೆ. ಇಲಾಖಾ ಶಿಸ್ತಿನ ವಿಚಾರಣೆಯಲ್ಲಿ ವೀಣಾ ವಿರುದ್ಧ ಆರೋಪವಿದೆ. ಇದೇ ಕಾರಣದಿಂದ ಇಲಾಖಾ ಮೇಲ್ಮನವಿ ಪ್ರಾಧಿಕಾರವು ಅವರ ವಿರುದ್ಧ ಆದೇಶಿಸಿ, ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿದೆ ಎಂದು ಪೀಠ ತಿಳಿಸಿದೆ.
ಕೋರ್ಟ್ ಮೆಟ್ಟಿಲೇರುವ ಪ್ರವೃತ್ತಿಗೆ ಕಡಿವಾಣ ಅಗತ್ಯ:ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯ ಪೀಠ, ವರ್ಗಾವಣೆಯಾದ ಸ್ಥಳಕ್ಕೆ ತಕ್ಷಣ ವರದಿ ಮಾಡಿಕೊಕೊಂಡು ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕು. ಆದರೆ, ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಅಲ್ಲದೇ, ವರ್ಗಾವಣೆಗೊಂಡ ಸ್ಥಳಕ್ಕೆ ಹಲವು ದಿನಗಳ ಕಾಲ ವರದಿ ಮಾಡಿಕೊಳ್ಳದೆ ಅನಾರೋಗ್ಯದ ಕಾರಣ ನೀಡಿ ಗೈರು ಆಗಿದ್ದಾರೆ. ಅವರಿಗೆ ಆಗಿದ್ದ ಅಲರ್ಜಿ ಗೈರು ಹಾಜರಿಗೆ ಕಾರಣ ನೀಡಿದ್ದಾರೆ. ಅಲರ್ಜಿಯು ಕೆಲಸಕ್ಕೆ ಗೈರು ಆಗುವಂತಹ ಕಾಯಿಲೆಯಲ್ಲ ಎಂಬುದಾಗಿ ವೈದ್ಯಕೀಯ ಮಂಡಳಿ ವರದಿ ನೀಡಿದೆ. ಈ ಅಂಶ ಪರಿಗಣಿಸಿರುವ ಸಕ್ಷಮ ಪ್ರಾಧಿಕಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದೆ.
ಅನಧಿಕೃತ ಗೈರು ಹಾಜರಿ ಉದ್ಯೋಗದಾತರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜತೆಗೆ, ಸಿಬ್ಬಂದಿಯಲ್ಲಿನ ಅಶಿಸ್ತಿಗೆ ಕಾರಣವಾಗಲಿದೆ. ರಜೆ ಮಂಜೂರಾತಿಗಾಗಿ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಬಳಿಕವೂ ಗೈರಾಗಿರುವುದು ನ್ಯಾಯಶಾಸ್ತ್ರದಲ್ಲಿ ದುರ್ವರ್ತನೆ ಎಂಬುದಾಗಿ ತೋರಿಸುತ್ತದೆ. ಸಿಬ್ಬಂದಿಯ ಈ ರೀತಿಯ ವರ್ತನೆಗೆ ಇಂಕ್ರಿಮೆಂಟ್ ಕಡಿತದಿಂದ ಸೇವೆಯಿಂದ ವಜಾಗೊಳಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.