ಬೆಂಗಳೂರು :ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಹಾಗೂ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಭದ್ರತಾ ಪಡೆಗಳಿಂದ ಪಥಸಂಚಲನ ಆರಂಭಿಸಲಾಗಿದೆ. ಬೆಂಗಳೂರು ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಂಡಗಳಿಂದ ಇಂದು ನಗರದ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಗಿದೆ.
ಶಸ್ತ್ರಾಸ್ತ್ರಧಾರಿ ಸಿಐಎಸ್ಎಫ್ ಯೋಧರು ಹಾಗೂ ಪೊಲೀಸರನ್ನೊಳಗೊಂಡ ಸುಮಾರು 300ಕ್ಕೂ ಅಧಿಕ ಜನರ ತಂಡ ಪಥಸಂಚಲನದಲ್ಲಿ ಭಾಗಿಯಾಗಿದೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವವರು, ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಎಚ್ಚರಿಕೆ ಹಾಗೂ ಚುನಾವಣಾ ಪ್ರಕ್ರಿಯೆ ಮೇಲೆ ಗಮನ ಇರಿಸುವುದರ ಭಾಗವಾಗಿ ಪಥ ಸಂಚಲನ ಆರಂಭಿಸಲಾಗಿದೆ.
ವಿಚಕ್ಷಣಾ ದಳಗಳ ಕಣ್ಗಾವಲು: ಜೊತೆಗೆ ರಾಜ್ಯದಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಲಿದೆ. ಅದಕ್ಕಾಗಿ 2,357 ಕ್ಷಿಪ್ರ ಪಡೆ, 2,669 ಸ್ಥಿರ ಕಣ್ಗಾವಲು ತಂಡ, 647 ವಿಡಿಯೋ ಕಣ್ಗಾವಲು ತಂಡ, 258 ಲೆಕ್ಕಪರಿಶೋಧಕ ಟೀಂಗಳು ಹಾಗೂ 257 ವಿಡಿಯೋ ವೀಕ್ಷಣೆ ತಂಡಗಳನ್ನು ನಿಯೋಜಿಸಲಾಗಿದೆ. ಅಂತಾರಾಜ್ಯ ಗಡಿ ಚೆಕ್ಪೋಸ್ಟ್ ಹಾಗೂ ಇತರ ಚೆಕ್ಪೋಸ್ಟ್ಗಳನ್ನು ರಚಿಸಲಾಗಿದೆ. 172 ಪೊಲೀಸ್ ಇಲಾಖೆಯ ಚೆಕ್ಪೋಸ್ಟ್ ಹಾಗೂ 40 ಅಬಕಾರಿ ಚೆಕ್ಪೋಸ್ಟ್ ಇರಲಿವೆ ಎಂದು ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.