ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುತ್ತಲ ನಿವಾಸಿಗಳಿಗೆ ಈ ಜೈಲಿನ ಜಾಮರ್ನಿಂದ ಸಮಸ್ಯೆ ಎದುರಾಗಿದೆ. ನೆಟ್ವರ್ಕ್ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದ ಓರ್ವ ಹೃದ್ರೋಗಿ ಸಾವನ್ನಪ್ಪಿದ್ದನ್ನು ನೆನಪಿಸಿದ ನಿವಾಸಿಗಳು ಕೂಡಲೇ ಈ ಸಮಸ್ಯೆಗೆ ಜೈಲಾಧಿಕಾರಿಗಳು ಸ್ಪಂದಿಸಬೇಕೆಂದು ಮನವಿ ಮಾಡಿದರು.
ಭುವನೇಶ್ವರಿ ಬಡಾವಣೆ, ನಾಗನಾಥಪುರ ಗ್ರಾಮಸ್ಥರು ಈ ಜಾಮರ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದಾರೆ. ಜೈಲಿನ ಒಳಗಡೆ ನೀರು ಪೂರೈಸುವ ಕೆಲ ಮಹಿಳೆಯರು ಜೈಲುವಾಸಿಗಳು ಎಗ್ಗಿಲ್ಲದೇ ಮೊಬೈಲ್ ಬಳಕೆ ಮಾಡುವುದನ್ನು ಗಮನಿಸಿ ಮಾಹಿತಿ ನೀಡುತ್ತಾರೆ. ಜಾಮರ್ ಜೈಲಿನ ಒಳಗಡೆ ಕೆಲಸ ಮಾಡದೇ ಜೈಲಿನ ಆಚೆ ಕೆಲಸ ಮಾಡುತ್ತಿರುವುದು, ಬಾಡಿಗೆ ಮನೆಗಳ ವಾಸಿಗಳಿಗೆ ಕುತ್ತು ತಂದಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಲಕ್ಷ್ಮಣ್ ತಿಳಿಸಿದ್ದಾರೆ.
ಶಾಲಾ ಮಕ್ಕಳ ವಾಹನದ ಜಿಪಿಎಸ್ ಲೊಕೇಷನ್ ಗೊತ್ತಾಗದದೇ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಎದುರಾದರೆ ಆಂಬ್ಯುಲೆನ್ಸ್ಗೆ ಕರೆ ಮಾಡಲು ನೆಟ್ವರ್ಕ್ ಸಿಗುತ್ತಿಲ್ಲ ಎಂದು ಗೌರಮ್ಮ ಎಂಬುವರು ತಿಳಿಸಿದ್ದಾರೆ. ತುರ್ತು ಸಾಗಣೆ ವಾಹನಗಳು, ಓಲಾ, ಊಬರ್, ಗ್ಯಾಸ್ ಇನ್ನಿತರೆ ವಾಹನಗಳಿಗೆ ಸಂಪರ್ಕ ಕಲ್ಪಿಸಲು ಆಗದೇ ಪರದಾಡುವ ಪರಿಸ್ಥಿತಿಯಿದೆ ಎಂದು ಶೃತಿ ಆರೋಪಿಸಿದ್ದಾರೆ.
ಮನೆಯಿಂದಲೇ ಕೆಲಸ ಮಾಡುವ ಟೆಕ್ಕಿಗಳಿಗೆ ಕೆಲಸ ಮಾಡಲಾಗದೇ ಮನೆ ಬಿಟ್ಟು ಹೊರಡುತ್ತಿದ್ದಾರೆ. ಇದರಿಂದ ಬಾಡಿಗೆ ಮನೆ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಮನೆಗಳು ಖಾಲಿಯಾಗಿದ್ದು, ಸಾಲ ಕಟ್ಟಲಾಗದೇ ಸಮಸ್ಯೆ ಎದುರಿಸುತ್ತಿದ್ದೇವೆ ಮನೆ ಒಡತಿ ರಾಧ ತಿಳಿಸಿದ್ದಾರೆ.