ಬೆಂಗಳೂರು: ರಾಜ್ಯ ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಸಾಂಘಿಕ ಹೋರಾಟ ನಡೆಸಲು ಪಕ್ಷದ ಸದಸ್ಯರಿಗೆ ಅಗತ್ಯ ಸಲಹೆ ಸೂಚನೆ ನೀಡುವುದು ಮತ್ತು ಹೋರಾಟದ ರೂಪುರೇಷೆ ಸಿದ್ಧಪಡಿಸುವುದು ಈ ಸಭೆಯ ಉದ್ದೇಶ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಂಜೆ 7ಗಂಟೆಗೆ ನಗರದ ಖಾಸಗಿ ತಾರಾ ಹೋಟೆಲ್‌ನಲ್ಲಿ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಸರ್ಕಾರದ ವಿರುದ್ಧ ಸದನದಲ್ಲಿ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತದೆ. ಸರ್ಕಾರದ ವಿರುದ್ಧ ಸದನದೊಳಗಡೆ ನಡೆಸಬೇಕಾದ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆಯಾಗಲಿದೆ. ಕೇಂದ್ರದ ಅನುದಾನದ ತಾರತಮ್ಯ ವಿಚಾರದಲ್ಲಿ ಸರ್ಕಾರ ಕಟ್ಟಿ ಹಾಕಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ಶಾಸಕರಿಗೆ ಸದನದಲ್ಲಿ ಮಾತನಾಡಲು ಸಿದ್ಧತೆ ಬಗ್ಗೆ ಸಭೆಯಲ್ಲಿ ಸೂಚನೆ ನೀಡಲುವ ಸಾಧ್ಯತೆ ಇದೆ. ಮೇಲ್ಮನೆ ಹಾಗೂ ಕೆಳಮನೆ ಎರಡೂ ಕಡೆಯ ಶಾಸಕರು ಸಭೆಗೆ ಬರಲು ಸೂಚನೆ ನೀಡಲಾಗಿದೆ.