ಮಂಗಳೂರು:ಅಪರಿಚಿತ ವ್ಯಕ್ತಿಯ ಮಾತು ನಂಬಿ ಆನ್ಲೈನ್ ಷೇರು ವ್ಯಾಪಾರದಲ್ಲಿ ತೊಡಗಿಸಿಕೊಂಡ ಮಂಗಳೂರಿನ ವ್ಯಕ್ತಿಯೊಬ್ಬರು 34.80 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಮಂಗಳೂರಿನ ವ್ಯಕ್ತಿಯೊಬ್ಬರು ಇನ್ಸ್ಟ್ಗ್ರಾಮ್ನಲ್ಲಿ ಲಿಂಕ್ ಒಂದನ್ನು ಕ್ಲಿಕ್ ಮಾಡಿದಾಗ Barclays SIL ಷೇರು ವ್ಯಾಪಾರ ಕಂಪನಿಯ ಬಗ್ಗೆ ಗಮನಿಸಿದ್ದಾರೆ. ಈ ಲಿಂಕ್ ಮುಖಾಂತರ ಷೇರು ಮಾರುಕಟ್ಟೆ ಅಪ್ಲಿಕೇಷನ್ ಡೌನ್ ಲೋಡ್ ಮಾಡಿದ್ದಾರೆ. ನಂತರ ಆ್ಯಪ್ನಲ್ಲಿ ಕಸ್ಟಮರ್ ಸರ್ವೀಸ್ನ ಚಾಟ್ ಬಾಕ್ಸ್ನಲ್ಲಿ ಇವರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿ ಹಣ ಹೂಡಿಕೆ ಮಾಡಿ ಹೆಚ್ಚಿನ ದುಡ್ಡು ಗಳಿಸಬಹುದೆಂದು ಪ್ರೇರೇಪಿಸಿದ್ದರು.
ಈ ವ್ಯಕ್ತಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದೆಂಬ ಇರಾದೆಯಿಂದ ತಮ್ಮ ಐಸಿಐಸಿ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ IMPS & RTGS ಮೂಲಕ ಒಟ್ಟು 34,80,000/- ರೂ.ಗಳನ್ನು ವರ್ಗಾಯಿಸಿದ್ದಾರೆ. ನಂತರ ಈ ವ್ಯಕ್ತಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ಅಪರಿಚಿತ ವ್ಯಕ್ತಿಗಳು ಶೇ.20 ರಷ್ಟು ತೆರಿಗೆ ಕಟ್ಟುವಂತೆ ಚಾಟ್ ಮುಖಾಂತರ ತಿಳಿಸಿ ಹಣ ವಿತ್ ಡ್ರಾ ಮಾಡದಂತೆ ಹೋಲ್ಡ್ ಮಾಡಿದ್ದಾರೆ.
ಇದರಿಂದ ಅನುಮಾನ ಬಂದು ತಾವು ಮೋಸ ಹೋಗಿರುವ ವಿಚಾರ ತಿಳಿದಿದೆ. "ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು Barclays SIL ಎಂಬ ಆನ್ಲೈನ್ ಷೇರು ವ್ಯಾಪಾರ ಕಂಪನಿಯ ಹೆಸರಿನಲ್ಲಿ ಆನ್ಲೈನ್ ಮುಖಾಂತರ ಒಟ್ಟು 34,80,000/- ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುತ್ತಾರೆ" ಎಂದು ಅವರು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:'ಡಿಜಿಟಲ್ ಅರೆಸ್ಟ್' ಮಾಡಿ ₹2.21 ಕೋಟಿ ವಂಚನೆ, ಐವರ ಬಂಧನ: ಏನಿದು ಕಳ್ಳರ ಹೊಸ ಕಸುಬು? - Digital Arrest Fraud