ಬೆಂಗಳೂರು: ಒಬ್ಬ ಅಂಗಾಂಗ ದಾನಿಯು ಎಂಟು ಜೀವಗಳನ್ನು ಉಳಿಸುವ ಮತ್ತು 75ಕ್ಕೂ ಹೆಚ್ಚು ಇತರ ಜನರ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಇದನ್ನು ಪುಷ್ಟೀಕರಿಸುವ ರೊಬೊಟಿಕ್ ಶಸ್ತ್ರಚಿಕಿತ್ಸೆಗಳ ಪರಿಚಯ ಟ್ರಾನ್ಸ್‌ಪ್ಲಾಂಟ್ ಕಾರ್ಯವಿಧಾನಗಳಿಗೆ ಹೊಸ ಮಾರ್ಗ ನೀಡಿದೆ. ಆ ಮೂಲಕ ಶಸ್ತ್ರಚಿಕಿತ್ಸಕರು ಅತ್ಯುತ್ತಮ ನಿಖರತೆಯೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಮಹಿಳಾ ದಿನ ಮತ್ತು ವಿಶ್ವ ಕಿಡ್ನಿ ದಿನದ ಜಂಟಿ ಆಚರಣೆ ಮತ್ತು ಕರ್ನಾಟಕದ ಮೊದಲ ಮರಣೋತ್ತರ ಕಿಡ್ನಿ ದಾನ ಮಾಡಿರುವ ದಾನಿ ಉಷಾ ಗೌರಿಯವರ ಗೌರವಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಉಷಾ ಅವರ ಕಥೆಯು ಭರವಸೆ ಮತ್ತು ಸ್ಫೂರ್ತಿಯ ಬೆಳಕಾಗಿದೆ. ಅವರ ಅಂಗಾಂಗ ದಾನದ ನಿಸ್ವಾರ್ಥ ಸೇವೆಯು ಮಾನವೀಯತೆಯ ಮೌಲ್ಯ ಮತ್ತು ಜೀವಗಳನ್ನು ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನವೀನ ಆರೋಗ್ಯ ತಂತ್ರಜ್ಞಾನವು ಕನಿಷ್ಟ ದೋಷಗಳೊಂದಿಗೆ ಅಪಾಯಕಾರಿ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುತ್ತದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಈ ಶಸ್ತ್ರ ಚಿಕಿತ್ಸೆಗಳು ಉತ್ತಮವಾಗಿವೆ. ರೊಬೊಟಿಕ್ಸ್ ಶಸ್ತ್ರಚಿಕಿತ್ಸೆಗಳು ದುಬಾರಿಯಾಗಿದ್ದು, ಹೆಲ್ತ್ ಪ್ಲಾನ್ಗಳಲ್ಲಿ ನಗದುರಹಿತ ಪಾವತಿಗಳ ಅಡಿಯಲ್ಲಿ ಅದನ್ನು ವಿಮಾದಾರರು ಕವರ್ ಮಾಡಿದರೆ, ಜನರಿಗೆ ಆರ್ಥಿಕವಾಗಿ ತುಂಬಾ ಸಹಾಯವಾಗುತ್ತದೆ. ಸುಧಾರಿತ ಆರೋಗ್ಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.