ನೇಹಾ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ: ಸಿಎಂ ಸಿದ್ದರಾಮಯ್ಯ ಮೈಸೂರು:''ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸುತ್ತೇನೆ. ಇದು ಲವ್ ಜಿಹಾದ್ ಅಲ್ಲ. ಕೂಡಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆದರೂ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ'' ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು (ಶನಿವಾರ) ಮೈಸೂರಿನ ಟಿ.ಕೆ. ಲೇಔಟ್ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ''ನೇಹಾ ಹಿರೇಮಠ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ. ಈ ಕೊಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಲು ಇಲಾಖೆ ಕೆಲಸ ಮಾಡುತ್ತಾ ಇದ್ದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಆದರೆ, ಇದನ್ನು ವಿರೋಧ ಪಕ್ಷದವರು ರಾಜಕೀಯಕ್ಕೆ ಬಳಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈ ಕೊಲೆ ಪ್ರಕರಣವನ್ನು ನಾನು ಸಹ ಖಂಡಿಸುತ್ತೇನೆ'' ಎಂದರು.
ನರೇಂದ್ರ ಮೋದಿ ಅಲೆ ಇಲ್ಲ:ಬಿಜೆಪಿ ಅವರು ದೇಶದಲ್ಲಿ ನರೇಂದ್ರ ಮೋದಿಯ ಮೇಲೆ ಅವಲಂಬನೆ ಆಗಿದ್ದಾರೆ. ಕರ್ನಾಟಕ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಅಲೆ ಇಲ್ಲ. ಈಗ ದೇಶದಲ್ಲಿ ಮೋದಿ ವಿರೋಧಿ ಅಲೆ ಹೆಚ್ಚಾಗಿದ್ದು, ಮತ್ತೆ ಕಾಂಗ್ರೆಸ್ ಹಾಗೂ ಇತರ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ತಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಜನರಿಗೆ ಉದ್ಯೋಗ ನೀಡಲಿಲ್ಲ. ಮತ್ತು ರಾಜ್ಯಗಳಿಗೆ ಕೊಡಬೇಕಾದ ಅನುದಾನ ಕೊಡುವಲ್ಲಿ ತಾರತಮ್ಯ ಮಾಡಿದ್ದಾರೆ. ದೇಶದ ಜನರಿಗೆ ಹಾಗೂ ಕರ್ನಾಟಕದ ಜನತೆಗೆ ಖಾಲಿ ಚೊಂಬು ಕೊಟ್ಟಿದ್ದಾರೆ. ಅದಕ್ಕೆ ನಾವು ಖಾಲಿ ಚೊಂಬು ಎಂದು ಹೇಳುತ್ತಿದ್ದೇವೆ. ಇದನ್ನು ತಿಳಿಸಲು ''ಖಾಲಿ ಚೊಂಬು'' ಜಾಹೀರಾತು ನೀಡಿದ್ದೇವೆ'' ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಕೋಮುವಾದಿ- ಸಿದ್ದರಾಮಯ್ಯ ಕಿಡಿ:''ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈಗ ಅವರಿಗೆ ಕಾಂಗ್ರೆಸ್ ಭಯವಿದೆ. ಜೆಡಿಎಸ್ ಈಗ ಕೋಮುವಾದಿ ಪಕ್ಷ ಹಾಗೂ ಕುಮಾರಸ್ವಾಮಿ ಕೋಮುವಾದಿ ಆಗಿದ್ದಾರೆ. ಕೂಡಲೇ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡಲಿ'' ಎಂದು ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನೇಹಾ ಹತ್ಯೆ ಪ್ರಕರಣ: ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ಆರೋಪಿ ತಾಯಿ - Faiyaz Mother Apologized