ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಬೆಂಗಳೂರು:ಕಾನೂನು ಎಲ್ಲರಿಗೂ ಒಂದೇ ರೀತಿ ಇದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದಿತ್ತು. ಎಂದು ಗೃಹ ಪರಮೇಶ್ವರ್ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯವಾಗಿ ಆಗಬಾರದಿತ್ತು. ನನಗಾಗಲೀ, ಯಾವುದೇ ಧರ್ಮಕ್ಕಾಗಲಿ, ಯಾರಿಗೇ ಆದರೂ ಕಾನೂನು ಒಂದೇ. ಕಾನೂನು ಬಿಟ್ಟು ಏನೂ ಮಾಡೋಕಾಗಲ್ಲ. ಅವನು ಮುಸ್ಲಿಂ ಆಗಿದ್ದಕ್ಕೆ ಕಾಂಗ್ರೆಸ್ ಅವರು ಪರ ಇದ್ದಾರೆ ಅಂತಿದ್ದಾರೆ. ನನ್ನ ಹಾಗೂ ಸಿಎಂ ವಿರುದ್ಧ ಅನೇಕ ಟೀಕೆ ಮಾಡ್ತಾ ಇದ್ದಾರೆ. ಅದಕ್ಕೆ ನಾವು ಯಾವುದೇ ಪ್ರತಿಕ್ರಿಯೆ ನೀಡ್ತಾ ಇಲ್ಲ. ಆದರೆ ಅವನಿಗೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡ್ತಾ ಇದ್ದೇವೆ ಎಂದರು.
ಪ್ರಕರಣವನ್ನು ಸಿಬಿಐಗೆ ವಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಬಿಐಗೆ ಹೋಗಬೇಕು ಅಂದ್ರೆ ಅದೇನು ದೊಡ್ಡ ವಿಚಾರ ಅಲ್ಲ. ಅನೇಕ ಪ್ರಕರಣಗಳನ್ನ ನಾವು ಹಿಂದೆಯೂ ವಹಿಸಿದ್ದೇವೆ. ಅವನು ಸಿಕ್ಕಿದ್ದಾನೆ.. ಎಲ್ಲೂ ಹೋಗಿಲ್ಲ.. ಕೇವಲ ಒಂದೇ ಗಂಟೆಯಲ್ಲಿ ಅವನನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಅವನಿಗೆ ಏನು ಶಿಕ್ಷೆ ಆಗಬೇಕೋ ಅದು ಆಗುತ್ತದೆ ಎಂದು ಗೃಹ ಸಚಿವರು ಹೇಳಿದರು.
ಬಿಜೆಪಿ ಕಾಂಗ್ರೆಸ್ ಜಾಹೀರಾತು ವಾರ್ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಅನ್ನೋದು ಯಾವತ್ತೂ ಈ ಮಟ್ಟಕ್ಕೆ ಹೋಗಬಾರದು. ನಾವು ಇಲ್ಲಿಯವರೆಗೆ ಪರಸ್ಪರ ದ್ವೇಷ ಮಾಡೋದನ್ನು ನೋಡಿರಲಿಲ್ಲ. ಪ್ರಧಾನ ಮಂತ್ರಿಗಳೇ ಧರ್ಮದ ಆಧಾರದ ಮೇಲೆ ಮಾತಾಡ್ತಾ ಇದ್ದಾರೆ. ಒಂದು ದೇಶದ ಪ್ರಧಾನಿ ಈ ರೀತಿ ಮಾತನಾಡುವುದನ್ನು ನೋಡಿರಲಿಲ್ಲ. ಮತಕ್ಕಾಗಿ ಈ ರೀತಿ ದ್ವೇಷ ಭಾಷಣ ಮಾತನಾಡಿರೋದು ಸರಿಯಲ್ಲ. ಜನ ಯಾವ ರೀತಿ ಇದನ್ನು ತೆಗೆದುಕೊಳ್ತಾರೆ ಅನ್ನೋದನ್ನು ನೋಡಬೇಕು. ಈ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದರು.
ಮೋದಿ ಶನಿ ಅನ್ನೋ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದೊಂದು ಕಾಲದಲ್ಲಿ ಯಾವ ರೀತಿ ಆಡಳಿತ ಮಾಡಬೇಕೋ ಅದು ಆಗಿದೆ. ಸಾರ್ವಜನಿಕ ವಲಯದಲ್ಲಿ ಇದ್ದಾಗ ನಾವು ಸರಿಯಾಗಿ ಮಾತನಾಡಬೇಕು. ನಾನೇ ಆದರೂ ಕೂಡ ಒಂದು ಹೇಳಿಕೆ ನೀಡಿದ್ರೆ ಅದರ ಮೇಲೆ ನನ್ನನ್ನ ಜನ ಅಳೆಯುತ್ತಾರೆ. ಜೊತೆಗೆ ತಿರುಚುವಂತ ಪ್ರಯತ್ನ ಕೂಡ ಆಗುತ್ತದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನ ಸಮರ್ಥನೆ ಮಾಡಲು ಆಗಲ್ಲ. ಯಾವುದೇ ಹೇಳಿಕೆ ನೀಡಿದರೂ ಅದರ ಮೇಲೆ ನಮ್ಮನ್ನು ಜನ ಅಳತೆ ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ನಮಗಿರುವ ಗ್ರೌಂಡ್ ಲೆವೆಲ್ ಮಾಹಿತಿ ಪ್ರಕಾರ ನಾವು 20 ಸ್ಥಾನ ಗೆಲ್ಲುತ್ತೇವೆ. ಕಾರ್ಯಕರ್ತರಿಗೆ ಕ್ಷೇತ್ರದ ಪಲ್ಸ್ ರಿಪೋರ್ಟ್ ಪ್ರಕಾರ ಒಂದಷ್ಟು ಅಚ್ಚರಿ ಫಲಿತಾಂಶ ಕಾದಿದೆ. ಬಿಜೆಪಿ ಹೇಳುವ ರೀತಿ ದೇಶದಲ್ಲಿ 400 ಸ್ಥಾನ ಗೆಲ್ಲುತ್ತೇವೆ ಅನ್ನೋದು ಸುಳ್ಳು. ಅವರ ಅಲೆ ಇಲ್ಲ. ಈಗ ಕಡಿಮೆ ಆಗಿದೆ ಎಂದು ಪರಮೇಶ್ವರ್ ಹೇಳಿದರು.
ಓದಿ:ನೇಹಾ ಹತ್ಯೆಗೆ ಖಂಡನೆ: ಸ್ವಯಂಪ್ರೇರಿತ ಧಾರವಾಡ ಬಂದ್ಗೆ ಉತ್ತಮ ಪ್ರತಿಕ್ರಿಯೆ - Dharawad bandh