ಬಾಗಲಕೋಟೆ:ನೇಹಾ ಹತ್ಯೆ ಪ್ರಕರಣವನ್ನು 'ಲವ್ ಜಿಹಾದ್' ಎಂದು ಅಮಿತ್ ಶಾ ಹೇಳಿರುವುದು ರಾಜಕೀಯಕ್ಕೋಸ್ಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದಲ್ಲಿ ಇಂದು ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾವು ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದೇವೆ. ವಿಚಾರಣೆಗೆ ಸ್ಪೆಷಲ್ ಕೋರ್ಟ್ ಮಾಡಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಮಾತನಾಡಿದ್ದೀನಿ ಎಂದು ಹೇಳಿದರು.
ಸರಕಾರ ಕಾನೂನು ಪ್ರಕಾರ ಏನೆಲ್ಲಾ ಮಾಡೋಕೆ ಸಾಧ್ಯವಿದೆಯೋ ಮಾಡಿದ್ದೇವೆ. ಪ್ರಕರಣವನ್ನು ಲವ್ ಜಿಹಾದ್ ಅಂತ ರಾಜಕೀಯಗೋಸ್ಕರ ಹೇಳಿದ್ದಾರೆ. ಹಾಗಿದ್ದರೆ, ಮಣಿಪುರ ಘಟನೆ ಬಗ್ಗೆ ಅಮಿತ್ ಶಾ ಯಾಕೆ ಮಾತಾಡಲಿಲ್ಲ?. ಮಣಿಪುರ ಸರಕಾರವನ್ನೇ ಅವರು ಮುಂದುವರೆಸಿದರು. ಸರ್ಕಾರವನ್ನು ಸೂಪರ್ ಸೀಡ್ ಮಾಡಿದ್ರಾ?. ಮುಖ್ಯಮಂತ್ರಿಯನ್ನು ಬದಲಾಯಿಸಿದ್ರಾ? ಎಂದು ತಿರುಗೇಟು ನೀಡಿದರು.