ಘಟನಾ ಸ್ಥಳಕ್ಕೆ ಶಾಸಕರ ಭೇಟಿ, ಪರಿಶೀಲನೆ (ETV Bharat) ಶಿವಮೊಗ್ಗ: ರಸ್ತೆಯಲ್ಲಿ ಬರ್ತ್ಡೇ ಪಾರ್ಟಿ ನಡೆಸಿದ ಯುವಕರ ಗುಂಪೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ, ಬೈಕ್ಗಳನ್ನು ಜಖಂಗೊಳಿಸಿರುವ ಘಟನೆ ಬುಧವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.
ಹೊಸಮನೆ ಬಡಾವಣೆಯ ಮೂರನೇ ತಿರುವುವಿನ ಮಾರಿಕಾಂಬ ದೇವಾಲಯ, ಅಂಬೇಡ್ಕರ್ ಭವನದ ಎದುರು ರಾತ್ರಿ ಸ್ಥಳೀಯ ಯುವಕರು ಬರ್ತ್ಡೇ ಪಾರ್ಟಿ ನಡೆಸಿದ್ದಾರೆ. ರಸ್ತೆ ಮಧ್ಯೆ ಕೇಕ್ ಕತ್ತರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದಾದ ನಂತರ ಈ ಯುವಕರ ಗುಂಪಿನ ಕೆಲವರು ಇಲ್ಲಿನ ಮನೆಗಳ ಮುಂದೆ ನಿಲ್ಲಿಸಿದ್ದ ಸಾಂಟ್ರೋ ಕಾರು, ಐ-20 ಕಾರು, ಎರಡು ಆಟೋ ಹಾಗೂ ಬೈಕ್ಗಳನ್ನು ಜಖಂಗೊಳಿಸಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕರ ಭೇಟಿ: ವಾಹನಗಳನ್ನು ಜಖಂಗೊಳಿಸಲಾದ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು.
ಕಾರ್ ಡ್ಯಾಮೇಜ್ (ETV Bharat) ಗಾಂಜಾ ನಶೆಯಲ್ಲಿ ದುಷ್ಕೃತ್ಯ: ಹೊಸಮನೆ ಬಡಾವಣೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಘಟನೆ. ಗಾಂಜಾ ಸೇವಿಸುವ ಪುಂಡರ ಗುಂಪು ಈ ಭಾಗದಲ್ಲಿ ಪದೇ ಪದೇ ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿದೆ. ನಶೆಯಲ್ಲಿ ಮನಸೋಇಚ್ಛೆ ಬೈಕ್‌ನಲ್ಲಿ ಸುತ್ತುವುದು, ಬೆದರಿಸುವುದು, ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಐಪಿಪಿಬಿ ಖಾತೆ ಹೊಂದಿದವರಿಗೆ ₹1 ಲಕ್ಷ ವದಂತಿ: ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಮಹಿಳೆಯರು - Women Rush To Post Office