ಕರ್ನಾಟಕ

karnataka

ETV Bharat / state

ಅಬಕಾರಿ ಇಲಾಖೆಯಲ್ಲಿ ವಾರಕ್ಕೆ ₹18 ಕೋಟಿ ಹಫ್ತಾ ವಸೂಲಿ ಆರೋಪ: ಏನಪ್ಪ ಇದು ನನಗೇ ಅರ್ಥವೇ ಆಗುತ್ತಿಲ್ಲವೆಂದ ತಿಮ್ಮಾಪುರ

ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಆರೋಪಿಸಿದ್ದಾರೆ.

ಬಿಜೆಪಿ ಆರೋಪ ನಿಕಾರಿಸಿದ ಸಚಿವ ತಿಮ್ಮಾಪುರ
ಬಿಜೆಪಿ ಆರೋಪ ನಿಕಾರಿಸಿದ ಸಚಿವ ತಿಮ್ಮಾಪುರ (ETV Bharat)

By ETV Bharat Karnataka Team

Published : Nov 6, 2024, 4:02 PM IST

ಬೆಂಗಳೂರು: "ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಇದನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು. ಇದು ಹಣದ ಅವ್ಯವಹಾರವಾಗಿರುವುದರಿಂದ ಜಾರಿ ನಿರ್ದೇಶನಾಲಯ ಕೂಡ ಕ್ರಮ ವಹಿಸಬೇಕು" ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್​ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ" ಎಂದು ದೂರಿದರು.

"ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್‌ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ. ಸಮಬಾಳು ಸಮಪಾಲು ಎಂಬಂತೆ ಸಚಿವ ತಿಮ್ಮಾಪುರ ಎಲ್ಲರಿಗೂ ಲಂಚ ಹಂಚಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್‌ ಎಂದು ಆರೋಪ ಮಾಡಿದ್ದರೂ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಈಗ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಭಿತ್ತಿಪತ್ರ ಅಂಟಿಸುವುದಾದರೆ ನಾನು ಕೂಡ ಬರುತ್ತೇನೆ" ಎಂದು ವ್ಯಂಗ್ಯವಾಡಿದರು.

"ಮದ್ಯ ಮಾರಾಟಗಾರರು ಈ ಕಿರುಕುಳ ವಿರೋಧಿಸಿ ಒಂದು ದಿನ ಬಂದ್‌ ಮಾಡಲಿದ್ದಾರೆ. ಈ ಸರ್ಕಾರ ಆದಾಯಕ್ಕೆ ಮದ್ಯವನ್ನೇ ನಂಬಿಕೊಂಡಿದೆ. ಹೀಗೆ ಬಾರ್‌ಗಳನ್ನು ಬಂದ್‌ ಮಾಡಿದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಲಿದೆ" ಎಂದು ಟೀಕಿಸಿದರು.

ಸಿಎಂ ತೆರೆದ ಪುಸ್ತಕದಲ್ಲಿ ಕಪ್ಪು ಚುಕ್ಕೆಗಳೇ ತುಂಬಿವೆ:"ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದುಕಿನ ತೆರೆದ ಪುಸ್ತಕದಲ್ಲಿ ಕಪ್ಪು ಚುಕ್ಕೆಗಳೇ ತುಂಬಿದೆ. ಅವರ ಕೈ ಕೆಳಗೆ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಯ ಮುಂದೆ ಅವರೇ ಕುಳಿತು ತನಿಖೆ ಎದುರಿಸುವುದೆಂದರೆ ಅವರಿಗೆ ನಾಚಿಕೆಯಾಗಬೇಕು. ಇಲ್ಲಿ ತನಿಖೆಗೂ ನಿರ್ದಿಷ್ಟ ಸಮಯ ನಿಗದಿಪಡಿಸಿದ್ದು, ಇದು ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತದೆ" ಎಂದು ಪ್ರಶ್ನಿಸಿದರು.

ಕರುಣೆ ಇಲ್ಲದ ಸರ್ಕಾರ: "ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು. ಆದರೂ ಹಿರಿಯ ಅಧಿಕಾರಿಗಳು ಇದನ್ನು ಕಡೆಗಣಿಸಿದ್ದಾರೆ. ಇದು ಕರುಣೆಯೇ ಇಲ್ಲದ ಸರ್ಕಾರ. ಸುಮಾರು 2 ಲಕ್ಷ ರೂ. ಲಂಚವನ್ನು ರುದ್ರಣ್ಣ ಅವರಿಂದ ಪಡೆಯಲಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ರ ಬರೆದ ಮಾದರಿಯಲ್ಲೇ ರುದ್ರಣ್ಣ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಎಂದು ಸಂದೇಶ ಕಳುಹಿಸಿದ್ದಾರೆ" ಎಂದರು.

"ಪಿಎಸ್‌ಐ ಪರಶುರಾಮ್‌ ಸಾವಿನ ಬಳಿಕ ಯಾರನ್ನೂ ಬಂಧನ ಮಾಡಿಲ್ಲ. ರುದ್ರಣ್ಣ ಅವರ ಪ್ರಕರಣ ಅದೇ ರೀತಿ ಆಗುವ ಸಂಭವವಿದೆ. ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿ ಹೋರಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.

ತಿಮ್ಮಾಪುರ ಪ್ರತಿಕ್ರಿಯೆ: ಆರ್‌.ಅಶೋಕ್​ ಅವರ ಆರೋಪಕ್ಕೆ ಶಿಗ್ಗಾಂವಿಯಲ್ಲಿ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಲ್ಲವೇ? ಟೈಟ್ ಮಾಡಿದ್ದಕ್ಕೆ ಈಗ ಈ ರೀತಿಯ ಆರೋಪ ಮಾಡಲಾಗುತ್ತಿದೆ. ಆದರೂ, ಏನು ನಡೆದಿದೆಯೋ ಅದೆಲ್ಲವನ್ನು ತಿಳಿದುಕೊಳ್ಳುವೆ ಎಂದಿದ್ದಾರೆ.

ಇವರಿಗೆ ಯಾರು ಡಿಮ್ಯಾಂಡ್ ಮಾಡ್ತಾರೆ? ಇವರು ಯಾಕೆ ಹಣ ಕೊಡ್ತಾರೆ? ಎಂದು ಪ್ರಶ್ನಿಸಿದ ಸಚಿವರು, ನನಗೆ ಇದೆಲ್ಲ ಯಾಕೆ ಬೇಕು? ಇಂಥದ್ದೆಲ್ಲ ನಾನು ಸಹಿಸಲ್ಲ ಎಂದರು.

500 ಕೋಟಿ ಅಂದ್ರೆ ಏನಪ್ಪ ಇದು ನನಗೇ ಅರ್ಥವೇ ಆಗುತ್ತಿಲ್ಲವೆಂದು ಅಚ್ಚರಿ ವ್ಯಕ್ತಪಡಿಸಿದ ಸಚಿವರು, ನಾವು ಕಠಿಣ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಆದಾಯ ಬರುವುದಿಲ್ಲ. ಕಠಿಣ ಕ್ರಮ ಕೈಗೊಂಡರೆ ಹೊರಗೆ ಬಂದು ಹೀಗೆ ಆರೋಪ ಮಾಡುತ್ತಾರೆ. ಯಾರ ಮೇಲೆ ಆರೋಪ ಕೇಳಿ ಬಂದಿಲ್ಲ? ವಿನಾಕಾರಣ ಸಿಎಂ ಮೇಲೂ ಆಪಾದನೆ ಮಾಡ್ತಿಲ್ವಾ? ಹಾಗೆಯೇ ಹಿಂದಿನ ಅಬಕಾರಿ ಸಚಿವರ ಮೇಲೂ ಆಪಾದನೆ ಬಂದಿದೆ. ಆಪಾದನೆ ಯಾರನ್ನು ಬಿಟ್ಟಿಲ್ಲ ಹೇಳಿ ಎಂದರು.

ಮದ್ಯ ಮಾರಾಟಗಾರರು ಯಾಕೆ ಲಂಚ ಕೊಡ್ತಾರೆ? ಯಾಕೆ ಹೆದರ್ತಾರೆ? ಯಾಕೆ ಇವರ ಮೇಲೆ ಕೇಸ್ ಹಾಕುತ್ತಾರೆ ಎಂದು ಪ್ರಶ್ನಿಸಿದ ತಿಮ್ಮಾಪುರ, ವ್ಯಾಪಾರ ಮಾಡುವವರಿಗೆ ಹೆದರಿಕೊಂಡು ನಮ್ಮ ಅಧಿಕಾರಿಗಳು ಇರಬೇಕಾ? ನಾನು ಯಾಕೆ ಡಿಮ್ಯಾಂಡ್ ಮಾಡಲಿ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರಿಗಳನ್ನ ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂಬ ಬಿ ವೈ ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ತಿಮ್ಮಾಪುರ, ವಿಜಯೇಂದ್ರರ ಇತಿಹಾಸ ನೋಡಿಯೇ ಬಿಜೆಪಿಯವರನ್ನು ಜನ ಮನೆಗೆ ಕಳಿಸಿದ್ದು. ಇವರು ನಮಗೇನು ಹೇಳೋದು ಎಂದು ತಿರುಗೇಟು ನೀಡಿದರು.

ಸುಖಾ ಸುಮ್ಮನೆ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ರಿಯಾಲಿಟಿ ಇದ್ರೆ ನಮ್ಮ ಸಿಎಂ ಹಾಗಿರೋದಿಲ್ಲ. ಕಿತ್ತು ಬಿಸಾಕಿ ಹೋಗ್ತಾರೆ. ಇಂಥದ್ದಕ್ಕೆಲ್ಲ ಹೆದರಿಸಿದರೆ ಹೆದರೋದಿಲ್ಲ. ಹೆದರಿದರೆ ಆಡಳಿತ ನಡೆಸೋದಕ್ಕೆ ಆಗಲ್ಲ ಎಂದರು.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನನ್ನ ವಿರುದ್ಧದ ಷಡ್ಯಂತ್ರ ಎಂದ ಸಚಿವ ತಿಮ್ಮಾಪುರ

ABOUT THE AUTHOR

...view details