ಬೆಂಗಳೂರು: ರಾಜ್ಯದ ಜನಗಣತಿ ವರದಿಯನ್ನು ಕ್ಯಾಬಿನೆಟ್ ಸಭೆ ಮುಂದೆ ತಂದು ತೀರ್ಮಾನಿಸುತ್ತೇವೆ ಎಂದು ಗೃಹ ಸಚಿವ ಡಾ .ಜಿ ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಸ್ವೀಕಾರ ವಿಚಾರವಾಗಿ ಪ್ರತಿಕ್ರಿಯಿಸಿ, ಇದೊಂದು ವಿಚಿತ್ರ ಸಂದರ್ಭ. ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದ್ರೆ ಮಾಡಿಲ್ಲ ಅಂತಾರೆ. ಮಾಡಿದರೆ ಯಾಕೆ ಈಗ ಮಾಡುತ್ತೀರಿ ಅಂತ ವ್ಯಾಖ್ಯಾನ ಮಾಡ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನಿಸುತ್ತೇವೆ. ಅಸೆಂಬ್ಲಿಗೆ ಬೇಕಾಗಿಲ್ಲ ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದರೆ ಮುಗೀತು ಎಂದರು.
ಕೇಂದ್ರ ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ, ಉಪಯೋಗಿಸುತ್ತಾರೆ. ಒಂದು ಸಾರಿ ಕ್ಯಾಬಿನೆಟ್ಗೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ. ರಾಜ್ಯ ಸರ್ಕಾರ 160 ಕೋಟಿ ರೂಪಾಯಿ ಖರ್ಚು ಮಾಡಿದೆ. ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು ಎಂದು ಪರಮೇಶ್ವರ್ ಹೇಳಿದರು.
ಹೈಕಮಾಂಡ್ ರಾಜ್ಯದ ಪ್ರತಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅಧ್ಯಕ್ಷರಿಗೆ ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರಬಹುದು. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯುತ್ತಿರುತ್ತದೆ. ಗೃಹ ಸಚಿವನಾಗಿ ನನಗೂ ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾಗಿ ಯಾವುದೇ ಗುಂಪುಗಾರಿಕೆ ಆಗ್ತಾ ಇಲ್ಲ. ನಾನು ಮಹದೇವಪ್ಪ ಮನೆಗೆ ಹೋಗಿದ್ದೆ. ರಹಸ್ಯವಾದ ಚರ್ಚೆ ಮಾಡುವಂಥದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.