ತುಮಕೂರು:"ಜಿಲ್ಲೆಗೆ ಸರಬರಾಜಾಗುವ ಹೇಮಾವತಿ ನದಿ ನೀರನ್ನು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಮಾಗಡಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಇದನ್ನು ವಿರೋಧಿಸಿ ಯೋಜನೆ ಕಾಮಗಾರಿ ಆರಂಭವಾಗುವ ಸ್ಥಳದಿಂದ ಪಾದಯಾತ್ರೆ ಶುರು ಮಾಡಿದ್ದೇವೆ" ಎಂದು ಜೆಡಿಎಸ್ ಶಾಸಕ ಸುರೇಶ್ ಬಾಬು ತಿಳಿಸಿದ್ದಾರೆ.
ಪಾದಯಾತ್ರೆ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿ, "ಇದು ನಮ್ಮ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆ. ಗುಬ್ಬಿ, ತುಮಕೂರು ಸೇರಿದಂತೆ ಎಲ್ಲಾ ತಾಲೂಕುಗಳಿಗೂ ತೊಂದರೆಯಾಗಲಿದೆ. ಈ ಯೋಜನೆ ನಿಲ್ಲಿಸುವಂತೆ ಹಲವು ಬಾರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇವೆ. ಅವರ ಧೋರಣೆ ಏನು ಎಂಬುದು ಗೊತ್ತಾಗಿದೆ. ನೀವು ಏನೇ ಮಾಡಿದ್ರೂ, ನೀರು ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಅವರ ಧೋರಣೆ. ಅದ್ಹೇಗೆ ನೀರು ತೆಗೆದುಕೊಂಡು ಹೋಗುತ್ತೀರಾ, ನೋಡೆ ಬಿಡೋಣ" ಎಂದು ಎಂದು ಸವಾಲು ಹಾಕಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು, ಏಳು ಜನ ಕಾಂಗ್ರೆಸ್ ಶಾಸಕರಿದ್ದಾರೆ. ನಿಮಗೇನಾದರೂ ಕಾಳಜಿ ಇದ್ದರೆ ಕೂಡಲೇ ಈ ಯೋಜನೆಯನ್ನು ನಿಲ್ಲಿಸಬೇಕು. ಹಿಂದೆ ಒಂದು ಸಲ ಜಿಪಂ ಕೆಡಿಪಿ ಸಭೆಯಲ್ಲಿ ಕೆನಾಲ್ ವಿರುದ್ಧ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಒಂದು ತೀರ್ಮಾಣ ಪಾಸ್ ಮಾಡಿದ್ದೇವೆ. ಹಾಗಾಗಿ ಈ ಯೋಜನೆಯನ್ನು ಹಿಂಪಡೆಯುವಂತೆ ಪರಮೇಶ್ವರ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಕುಣಿಗಲ್ ಗಡಿ ದಾಟಿದ ಮೇಲೆ ನಿಮಗೆ ಹೇಗೆ ಬೇಕೋ ಹಾಗೆ ಮಾಡಿ. ನಮ್ಮ ಜಿಲ್ಲೆಯಿಂದ ಲಿಂಕ್ ಕೆನಾಲ್ ಬೇಡ. ಬೇರೆ ಯಾವುದೇ ಮಾರ್ಗದಲ್ಲಿ ಮಾಡಿಕೊಳ್ಳಿ" ಎಂದರು.
ಇಂದಿನಿಂದ ಎರಡು ದಿನ ಪಾದಯಾತ್ರೆ:ಗುಬ್ಬಿ ತಾಲೂಕಿನ ಸಾಗರನಹಳ್ಳಿಯ ಹೇಮಾವತಿ ನಾಲೆ ಗೇಟ್ನಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಆರಂಭವಾಗಿದೆ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಗೆ ಕೈ ಜೋಡಿಸಿದ ಎನ್ಡಿಎ, ರೈತ ಪರ ಸಂಘಟನೆಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ನಮ್ಮ ನೀರು ನಮ್ಮ ಹಕ್ಕು ಎಂದು ಘೋಷ ವಾಕ್ಯದೊಂದಿಗೆ ಪಾದಯಾತ್ರೆ ಆರಂಭಿಸಿವೆ.