ಮಂಗಳೂರು: ಪಾರ್ಟ್ ಟೈಮ್ ಜಾಬ್ ಆಮಿಷವೊಡ್ಡಿ 28 ಲಕ್ಷ ರೂ. ವಂಚಿಸಿದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 7ಕ್ಕೇರಿದೆ. ಬೆಂಗಳೂರಿನ ಅಮೀರ್ ಸುಹೇಲ್ ಮತ್ತು ಕಾಶ್ಮೀರದ ಸುಹೇಲ್ ಅಹ್ಮದ್ ಸೆರೆಸಿಕ್ಕವರು.
ವಂಚನೆ ಹೇಗೆ?:ಇವರು ಜುಲೈ 21ರಂದು ಪಾರ್ಟ್ ಟೈಮ್ ಜಾಬ್ ಬಗ್ಗೆ ವ್ಯಕ್ತಿಯೊಬ್ಬರಿಗೆ ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದರು. ಮೆಸೇಜ್ನಲ್ಲಿ ಟೆಲಿಗ್ರಾಮ್ ಆ್ಯಪ್ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಟೆಲಿಗ್ರಾಮ್ ಆ್ಯಪ್ನಲ್ಲಿ ಒಂದು ವಿಡಿಯೋ ಕಳುಹಿಸಿ ಅದನ್ನು ವೀಕ್ಷಿಸಿ ಅದರ ಸ್ತ್ರೀನ್ ಶಾಟ್ ಕಳುಹಿಸಲು ಹೇಳಿದ್ದರು. ಅಂತೆಯೇ ವೀಕ್ಷಿಸಿ ಆರೋಪಿಗಳಿಗೆ ಅದರ ಸ್ಕ್ರೀನ್ ಶಾಟ್ ಕಳುಹಿಸಿದ್ದಾರೆ. ಈ ಸ್ಕ್ರೀನ್ ಶಾಟ್ ಕಳಿಸಿದ ತಕ್ಷಣವೇ ವ್ಯಕ್ತಿಯ ಬ್ಯಾಂಕ್ ಖಾತೆಗೆ 130 ರೂ. ಹಾಕಿದ್ದಾರೆ.
ನಂತರ ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಆರೋಪಿಗಳು ಅದನ್ನು ಸರಿಮಾಡಲು ಮತ್ತೊಂದು ಟೆಲಿಗ್ರಾಮ್ ಲಿಂಕ್ ಕಳುಹಿಸಿದ್ದಾರೆ. ಈ ಲಿಂಕ್ ಓಪನ್ ಮಾಡುವ ಮುನ್ನ ಆರೋಪಿಗಳು, ತಮಗೆ 1,000 ರೂ. ಹಾಕುವಂತೆ ಹೇಳಿದ್ದಾರೆ. ಅದರಂತೆ ತಮ್ಮ ಬ್ಯಾಂಕ್ನ ಖಾತೆಯಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ಹಣ ಹಾಕಿದ್ದಾರೆ. ಹೀಗೆ ಹೆಚ್ಚು ಹಣ ಕೊಡುವುದಾಗಿ ನಂಬಿಸಿ ಒಟ್ಟು 28,18,065 ರೂ.ಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ತಾವು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು.