ಬೆಳಗಾವಿ:ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆಗೆ ನಡೆಯುವ ಮತದಾನಕ್ಕೆ ದಿನಗಣನೆ ಶುರುವಾಗಿದೆ. ರಾಜಕೀಯ ಪಕ್ಷಗಳ ಪೈಪೋಟಿ, ಪ್ರಚಾರದ ಭರಾಟೆ ಜೋರಾಗಿದೆ. ಆದರೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಯಾವುದೇ ಅಭ್ಯರ್ಥಿಯಿಂದಲೂ ವ್ಯಕ್ತವಾಗುತ್ತಿಲ್ಲ ಎಂಬುದು ಜನರ ಮಾತು. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ವಿಜೃಂಭಿಸುತ್ತಿವೆ.
ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬರಗಾಲ ರೈತರನ್ನು ಹೈರಾಣಾಗಿಸಿದೆ. ಜನ ಉದ್ಯೋಗ ಅರಸಿ ನೆರೆ ರಾಜ್ಯಗಳಿಗೆ ಗುಳೇ ಹೋಗುವುದು ತಪ್ಪುತ್ತಿಲ್ಲ. ಕೈಗಾರಿಕೆಗಳ ಬೆಳವಣಿಗೆ, ಐಟಿ-ಬಿಟಿ ಸ್ಥಾಪನೆಗೆ ನಿರಾಸಕ್ತಿ ಕಾಣುತ್ತಿದೆ. ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳು, ಇನ್ನೂ ಸುಧಾರಿಸಿಲ್ಲ ಸಂಪರ್ಕ ವ್ಯವಸ್ಥೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಅಭಿವೃದ್ಧಿ ರಾಜಕೀಯ ವ್ಯಕ್ತಿಗಳ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ.
ಈಗ ಲೋಕಸಭೆ ಚುನಾವಣೆ ಬಂದಿದೆ. ಮುಂದಿನ ಹೊಸ ಸರ್ಕಾರವಾದ್ರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿ ಎಂಬ ಆಸೆಗಣ್ಣಿನಿಂದ ಮತದಾನಕ್ಕೆ ಜಿಲ್ಲೆಯ ಮತದಾರರು ಸಜ್ಜಾಗಿದ್ದಾರೆ. ಈ ಕುರಿತು ಕನ್ನಡಪರ, ರೈತ ಹೋರಾಟಗಾರರು ಮತ್ತು ಉದ್ಯಮಿಗಳನ್ನು 'ಈಟಿವಿ ಭಾರತ'ದೊಂದಿಗೆ ತಮ್ಮ ಬೇಟಿಕೆಗಳನ್ನು ತಿಳಿಸಿದರು.
ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, "ರಾಜ್ಯದ ಎಲ್ಲ ಸಂಸದರು ಒಗ್ಗಟ್ಟಾಗಿ ಪಕ್ಷ ಬೇಧ ಮರೆತು ಕರ್ನಾಟಕಕ್ಕೆ ಅವಶ್ಯವಿರುವ ಯೋಜನೆಗಳನ್ನು ತರಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ತರಲು ವನ್ಯಜೀವಿ, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಅದೇ ರೀತಿ ದೀರ್ಘಕಾಲದ ಬೇಡಿಕೆಯಾಗಿರುವ ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಗೆಹರಿಸಿ ಕಾಮಗಾರಿ ಆರಂಭಿಸಬೇಕು. ಜಿಲ್ಲೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಾದ ಸವದತ್ತಿ ಯಲ್ಲಮ್ಮಗುಡ್ಡ, ರಾಮದುರ್ಗದ ಶಬರಿಕೊಳ್ಳ, ಗೊಡಚಿನಮಲ್ಕಿ, ಗೋಕಾಕ್ ಫಾಲ್ಸ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಅದೇ ರೀತಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮಾಜಿ ಹೆಸರಿಡಬೇಕು. ರೈಲ್ವೇ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿಮಠದ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡಬೇಕು" ಎಂದು ಆಗ್ರಹಿಸಿದರು.