ಕಾರವಾರ:ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಮೊದಲ ಮಳೆಗೆ ಹಲವೆಡೆ ನೀರು ತುಂಬಿಕೊಂಡು ಅವಾಂತರಗಳಾಗಿವೆ. ಅರೆಬರೆಗೊಂಡಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಲ್ಲು ಬಂಡೆಗಳು ಹೆದ್ದಾರಿಗೆ ಉರುಳುತ್ತಿವೆ. ಕೆಲವೆಡೆ ಗುಡ್ಡವೇ ಕುಸಿಯುವ ಭೀತಿ ಇದೆ. ಹೀಗಾಗಿ, ಪ್ರಯಾಣಿಕರು ಪ್ರಾಣಭಯದಲ್ಲೇ ಸಂಚಾರ ಮಾಡುವಂತಾಗಿದೆ.
ಕಳೆದ 10 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನಗರದ ಟನಲ್ ಬಳಿ ಗುಡ್ಡದಿಂದ ಕಲ್ಲುಗಳು ಉರಳಿ ಹೆದ್ದಾರಿಗೆ ಬಿದ್ದಿವೆ. ಆ ವೇಳೆ ಪ್ರಯಾಣಿಕರು ಯಾರೂ ಸಂಚರಿಸದ ಕಾರಣ ಅನಾಹುತ ತಪ್ಪಿದೆ. ಹೆದ್ದಾರಿ ಅಗಲೀಕರಣದ ವೇಳೆ ಕರಾವಳಿಯುದ್ದಕ್ಕೂ ಅವೈಜ್ಞಾನಿಕವಾಗಿ ತೆರವು ಮಾಡಿದ ಕೆಲ ಗುಡ್ಡಗಳು ಈಗಲೂ ಬಾಯ್ತೆರೆದಿವೆ.
ಕಾರವಾರದ ಮಾಜಾಳಿ ಗಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳಿಸಲಾಗುತ್ತಿದೆ. ಆದರೆ ಜಿಲ್ಲೆಯ ಕರಾವಳಿಯುದ್ದಕ್ಕೂ ಅರೆಬರೆ ಕಾಮಗಾರಿಯಾಗಿದ್ದು, ಇದೀಗ ಐಆರ್‌ಬಿ ಕಂಪನಿ ಕೂಡ ಕಾಮಗಾರಿಯನ್ನು ಕೆಲವೆಡೆ ನಿಲ್ಲಿಸಿದೆ. ಇದರಿಂದಾಗಿ ಮಳೆಗಾಲದಲ್ಲಿ ಹೆದ್ದಾರಿ ಸಂಚಾರವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಹೆದ್ದಾರಿಯುದ್ದಕ್ಕೂ ಒಮ್ಮೆಲೆ ಎದುರಾಗುವ ತಿರುವುಗಳು, ಸರಿಯಾದ ಸೂಚನಾ ಫಲಕಗಳಿಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.