ಮೈಸೂರು:ಇತ್ತೀಚೆಗೆ ಚೊಚ್ಚಲ ಖೋ ಖೋ ವಿಶ್ವಕಪ್ ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡದ ಆಟಗಾರ್ತಿ ಚೈತ್ರಾ ಅವರಿಗೆ ಹುಟ್ಟೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಖೋ ಖೋ ವಿಶ್ವಕಪ್ ಗೆದ್ದ ಭಾರತದ ವನಿತೆಯರ ತಂಡದಲ್ಲಿದ್ದ ಚೈತ್ರಾ, ಫೈನಲ್ ಸೇರಿದಂತೆ ಹಲವು ಪಂದ್ಯಗಳಲ್ಲಿ ಅತ್ತುತ್ಯಮ ಪ್ರದರ್ಶನ ತೋರಿದ್ದರು. ಶನಿವಾರ(ಇಂದು) ಸಂಜೆ ಕುರುಬೂರು ಗ್ರಾಮಕ್ಕೆ ಆಗಮಿಸಿದ ಅವರಿಗೆ ಗ್ರಾಮಸ್ಥರು ಹಾಗೂ ಚೈತ್ರಾ ವ್ಯಾಸಂಗ ಮಾಡಿದ ಶಾಲೆಯ ವತಿಯಿಂದ ಅದ್ಧೂರಿ ಹೂ ಮಳೆಗರೆದು ಬರಮಾಡಿಕೊಳ್ಳಲಾಯಿತು.
ಖೋ ಖೋ ಚಾಂಪಿಯನ್ ಚೈತ್ರಾಗೆ ಭವ್ಯ ಸ್ವಾಗತ (ETV Bharat) ವಿಶ್ವಕಪ್ ಖೋ ಖೋ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಕುಮಾರಿ ಚೈತ್ರಾ, ಕುರುಬೂರು ಗ್ರಾಮದ ಸಾಮಾನ್ಯ ಕುಟುಂಬದ ಹೆಣ್ಣು ಮಗಳಾಗಿದ್ದಾರೆ. ಅವರಿಗೆ ನಿನ್ನೆ(ಶುಕ್ರವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ, 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದರು.
ಕುರುಬೂರು ಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಅದ್ದೂರಿಯಾಗಿ ಸ್ವಾಗತಿಸಿ, ಚೈತ್ರಾಗೆ ಮುಖ್ಯಮಂತ್ರಿಗಳು ಸರ್ಕಾರಿ ಉದ್ಯೋಗ ಹಾಗೂ ಮೈಸೂರಿನಲ್ಲಿ ನಿವೇಶನ ನೀಡಲಿ ಎಂದು ಮನವಿ ಮಾಡಿದರು.
ಚೈತ್ರಾಗೆ ಭವ್ಯ ಸ್ವಾಗತ (ETV Bharat) ಹೀಗಿತ್ತು ಮಹಿಳಾ ಖೋ ಖೋ ವಿಶ್ವಕಪ್ ಫೈನಲ್ ಹಣಾಹಣಿ:ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜ.19ರಂದು ನಡೆದ ಚೊಚ್ಚಲ ಖೋ - ಖೋ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಭಾರತದ ವನಿತೆಯರು ಚಾಂಪಿಯನ್ ಆಗಿದ್ದರು. ಅಂತಿಮ ಹಣಾಹಣಿಯಲ್ಲಿ ನೇಪಾಳವನ್ನು ಮಣಿಸಿದ ಭಾರತ ತಂಡ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತ್ತು.
ಇದನ್ನೂ ಓದಿ:ಐಸಿಸಿ ವರ್ಷದ ಅತ್ಯುತ್ತಮ ಟಿ-20 ತಂಡ ಪ್ರಕಟ: ಭಾರತೀಯನಿಗೆ ನಾಯಕ ಪಟ್ಟ!
ಪ್ರಿಯಾಂಕಾ ಇಂಗ್ಲೆ ನಾಯಕತ್ವದ ಮಹಿಳಾ ತಂಡ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿತ್ತು. ಭಾರತ ಚೇಸ್ ಮತ್ತು ಡಿಫೆನ್ಸ್ ಎರಡರಲ್ಲೂ ಪ್ರಾಬಲ್ಯ ಮೆರೆದಿತು. ಟರ್ನ್-1ರಲ್ಲಿ ದಾಳಿಗಿಳಿದ ವನಿತೆಯರು ರಕ್ಷಣಾ ವಿಭಾಗದಲ್ಲಿ ನೇಪಾಳದ ಆಟಗಾರ್ತಿಯರು ಮಾಡಿದ ತಪ್ಪುಗಳ ಸಂಪೂರ್ಣ ಲಾಭ ಪಡೆದು, 34-0 ಅಂತರದ ಬೃಹತ್ ಮುನ್ನಡೆ ಸಾಧಿಸಿತ್ತು. ಎರಡನೇ ಟರ್ನ್ನಲ್ಲಿ ನೇಪಾಳ ತಂಡ ಪ್ರತಿರೋಧ ನೀಡಿತ್ತಾದರೂ ಭಾರತದ ಡಿಫೆಂಡರ್‌ಗಳು ಸುಲಭವಾಗಿ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ, ಎರಡನೇ ಟರ್ನ್ನಲ್ಲೂ ಕೂಡ ಭಾರತ 35-24 ಅಂಕಗಳ ಮುನ್ನಡೆ ಸಾಧಿಸಿತ್ತು. ಬಳಿಕ ಮೂರನೇ ಟರ್ನ್ನಲ್ಲಿ ಮತ್ತೊಮ್ಮೆ ದಾಳಿಗಿಳಿದ ಟೀಂ ಇಂಡಿಯಾ, 49 ಅಂಕಗಳ ಭಾರಿ ಮುನ್ನಡೆ ಪಡೆದುಕೊಂಡಿತ್ತು.
ಚೈತ್ರಾಗೆ ಭವ್ಯ ಸ್ವಾಗತ (ETV Bharat) 4ನೇ ಮತ್ತು ಕೊನೆಯ ಟರ್ನ್ನಲ್ಲಿ ನೇಪಾಳ ತಂಡ ಭಾರತದ ಡಿಫೆಂಡರ್‌ಗಳನ್ನು ಔಟ್ ಮಾಡಲು ಹರಸಾಹರಪಟ್ಟರೂ ಕೂಡ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಭಾರತದ ವನಿತೆಯರು 78-40 ಅಂಕಗಳ ಅಂತರದಿಂದ ನೇಪಾಳವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.
ಇದನ್ನೂ ಓದಿ: ಭಾರತಕ್ಕೆ ಖೋ-ಖೋ ವಿಶ್ವಕಪ್ ಡಬಲ್ ಸಂಭ್ರಮ: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಮಹಿಳಾ, ಪುರುಷರ ತಂಡಗಳು