ಗಂಗಾವತಿ:ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿರುವ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಹರಿಸಿದ್ದರಿಂದ ನದಿ ಪಾತ್ರದಲ್ಲಿನ ಗ್ರಾಮಗಳ ಜಮೀನು, ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿಯಾಗುವ ಆತಂಕ ಎದುರಾಗಿದೆ.
ಜನ, ಜಾನುವಾರು ಸಂಚಾರ ನಿರ್ಬಂಧ: ಗ್ರಾಮಗಳ ಜನ ವಸತಿ ಪ್ರದೇಶಕ್ಕೂ ಕೂಡ ನೀರು ಆವರಿಸುವ ಭೀತಿ ಉಂಟಾಗಿದೆ. ಹೀಗಾಗಿ, ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್, ನದಿ ಪಾತ್ರದಿಂದ ನೂರು ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜನ, ಜಾನುವಾರು ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಗದ್ದೆಗಳಿಗೆ ನುಗ್ಗಿದ ನೀರು (ETV Bharat) ಸದ್ಯ ನದಿಯಲ್ಲಿ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹರಿಯುತ್ತಿದೆ. ರಾತ್ರಿ ವೆಳೆಗೆ ನೀರಿನ ಪ್ರಮಾಣ ಒಂದೂವರೆ ಲಕ್ಷ ಕ್ಯೂಸೆಕ್ಗೆ ಏರುವ ಸಂಭವವಿದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ, ಸಣಾಪುರ, ಹನುಮನಹಳ್ಳಿ, ಋಷಿಮುಖ, ಆನೆಗೊಂದಿ, ಬಸವನದುರ್ಗ ಸೇರಿದಂತೆ ನಾನಾ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಮುಳುಗಿದ ಕಂಪ್ಲಿ ಸೇತುವೆ:ತುಂಗಭದ್ರಾ ನದಿ ಆರ್ಭಟದಿಂದ ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಯಾವುದೇ ಕುರುಹು ಕೂಡ ಕಾಣದಂತಾಗಿದೆ. ಪರಿಣಾಮ ಕೊಪ್ಪಳ - ಬಳ್ಳಾರಿ ಜಿಲ್ಲೆಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಭಾಗದಲ್ಲಿನ ಶ್ರೀ ಕೃಷ್ಣದೇವರಾಯ ಸಮಾಧಿ ಸ್ಮಾರಕ 64 ಕಾಲಿನ ಮಂಟಪವೂ ಕೂಡ ಸಂಪೂರ್ಣ ಮುಳುಗಡೆಯಾಗಿದೆ. ಆನೆಗೊಂದಿಯಿಂದ ನವವೃಂದಾವನಕ್ಕೆ ಹೋಗುವ ನದಿ ಮಾರ್ಗದ ಸಂಪರ್ಕ ಕಡಿತವಾಗಿದೆ. ನದಿ ಆಚೆ ಇರುವ ಋಷಿಮುಖ ಪರ್ವತ ಮತ್ತು ವಿರುಪಾಪುರಗಡ್ಡೆಗಳ ಸಂಪರ್ಕ ಬಂದ್ ಆಗಿದೆ.
ಇದನ್ನೂ ಓದಿ:ಕೆಆರ್ಎಸ್ ಡ್ಯಾಂನಿಂದ 1.3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಎಚ್ಚರ ವಹಿಸಲು ಜನರಿಗೆ ಸೂಚನೆ - KRS Dam Water Released