ಬೆಂಗಳೂರು:ರಾಜ್ಯವನ್ನು ಅಂತಾರಾಷ್ಟ್ರೀಯ ವಿಹಾರ ನೌಕೆ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಕರ್ನಾಟಕ ಜಲಸಾರಿಗೆ ಮಂಡಳಿ ಕರಾವಳಿ ಭಾಗದ ಮಂಗಳೂರಲ್ಲಿ ದೇಶದಲ್ಲೇ ಮೊದಲ ಅಂತಾರಾಷ್ಟ್ರೀಯ ವಿಹಾರ ನೌಕಾಯಾನ (CRUISE) ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯದ ಕರಾವಳಿ ಭಾಗ ಬಂದರು ಪ್ರವಾಸೋದ್ಯಮದ ಹಾಟ್ ಸ್ಪಾಟ್ ಆಗಲಿದೆ. ವಿದೇಶಗಳಲ್ಲಿ ಇರುವಂತೆ ರಾಜ್ಯದ ಕರಾವಳಿ ಭಾಗವೂ ಐಷಾರಾಮಿ ವಿಹಾರ ನೌಕಾಯಾನದ ಕೇಂದ್ರ ಬಿಂದುವಾಗಲಿದೆ. ಈ ಸಂಬಂಧ ಕರ್ನಾಟಕ ಜಲಸಾರಿಗೆ ಮಂಡಳಿ ಪಿಪಿಪಿ ಮಾದರಿಯಡಿ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದು, ಅದರ ಅನುಷ್ಠಾನದ ಪ್ರಕ್ರಿಯೆಯಲ್ಲಿ ತೊಡಗಿದೆ.
ಅಂತಾರಾಷ್ಟ್ರೀಯ CRUISE ನಿರ್ಮಾಣಕ್ಕೆ ಸಿದ್ಧತೆ:ಇನ್ನು ಮುಂದೆ ಮಂಗಳೂರು, ಅಂತಾರಾಷ್ಟ್ರೀಯ ಕ್ರೂಸ್ ನೌಕೆಗಳಿಗೆ ಕೇಂದ್ರ ತಾಣವಾಗಲಿದೆ. ನಗರವನ್ನು ಅಂತಾರಾಷ್ಟ್ರೀಯ ವಿಹಾರನೌಕೆಯ ಕೇಂದ್ರ ಬಿಂದುವಾಗಿ ಮಾಡಲು ನಿಟ್ಟಿನಲ್ಲಿ ರಾಜ್ಯ ಜಲಸಾರಿಗೆ ಮಂಡಳಿ ಇಲ್ಲಿನ ಸೋಮೇಶ್ವರದಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಬಂದರು ಮಾಡಲು ತಯಾರಿ ನಡೆಸಿದೆ. ಸುಮಾರು 2,500- 3000 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಲ್ಲೇ ಪ್ರಪಥಮ ಬಾರಿಗೆ ಅಂತಾರಾಷ್ಟ್ರೀಯ ಕ್ರೂಸ್ ಬಂದರು ನಿರ್ಮಾಣ ಮಾಡಲಿದೆ.
ಗೋವಾ ಸೇರಿದಂತೆ ದೇಶದಲ್ಲಿ ಸಣ್ಣ ಸಣ್ಣ ಕ್ರೂಸ್ ಬಂದರುಗಳು ಇವೆ. ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ವಿಹಾರ ನೌಕೆಗಳನ್ನು ನಿಲ್ಲಿಸುವ ವಿಶೇಷ ಬಂದರು ಇಲ್ಲ. ಅದಕ್ಕಾಗಿಯೇ ಈಗ ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಭಾರತದಲ್ಲಿ ವಿದೇಶಿ ವಿಹಾರ ನೌಕೆಗಳು ಹೆಚ್ಚಾಗಿ ಲಕ್ಷದ್ವೀಪ, ಅಂಡಮಾನ್ ನಿಕೋಬಾರ್, ಕೇರಳ, ಗೋವಾ, ಮುಂಬೈ ಕರಾವಳಿಗೆ ಹೆಚ್ಚಾಗಿ ಆಗಮಿಸುತ್ತಿವೆ. ಈ ವಿಲಾಸಿ ಕ್ರೂಸ್ ನೌಕೆಗಳ ಲಂಗರು ಹಾಕಲು ದೇಶದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೂಸ್ ಬಂದರು ಇಲ್ಲ. ಹಾಗಾಗಿ ಅತಿ ಹೆಚ್ಚು ಕ್ರೂಸ್ ಪ್ರವಾಸೋದ್ಯಮಕ್ಕೆ ಬೇಡಿಕೆ ಇರುವ ಮಂಗಳೂರಲ್ಲಿ ಕ್ರೂಸ್ ಬಂದರು ಮಾಡಲು ಸಿದ್ಧತೆ ನಡೆಸಲಾಗಿದೆ.
ಅಂತಾರಾಷ್ಟ್ರೀಯ CRUISE ವಿಶೇಷತೆಗಳೇನು?:ಇಲ್ಲಿನಿರ್ಮಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ದೇಶದಲ್ಲೇ ಮೊದಲ ಸುಸಜ್ಜಿತ ಬೃಹತ್ ಕ್ರೂಸ್ ಬಂದರು ಆಗಿರಲಿದೆ. ಈ ಬಂದರಿನಲ್ಲಿ ಒಟ್ಟು ಏಳು ಬರ್ತ್ಗಳನ್ನು ಮಾಡಲು ಉದ್ದೇಶಿಸಲಾಗಿದೆ. ಕೆಳಗಿನ ಮೂರು ಬರ್ತ್ಗಳು ಕ್ರೂಸ್ ಬರ್ತ್ಗಳಾಗಿರಲಿವೆ. ಮೇಲಿನ ನಾಲ್ಕು ಬರ್ತ್ಗಳಲ್ಲಿ ಕ್ಲೀನ್ ಕಾರ್ಗೋ ಬರ್ತ್ ನಿರ್ಮಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.