ಬೆಳಗಾವಿ:ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯಿಂದ ಬೇಸತ್ತು ಹಿರಿಯರ ಸಮ್ಮುಖದಲ್ಲಿ ದೂರವಾಗಿದ್ದ ಪತ್ನಿಗೆ ಚೂರಿ ಇರಿದು ಪತಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ನಡೆದಿದೆ.
ಕುಡುಕ ಗಂಡನ ಕಾಟಕ್ಕೆ ಬೇಸತ್ತು ಪತ್ನಿ ದೂರವಾಗಿ ತವರು ಮನೆಯಲ್ಲಿ ವಾಸವಾಗಿದ್ದರು. ತವರು ಮನೆಯವರ ಜೊತೆಗೆ ಸಂತೆಗೆಂದು ಪಾಶ್ಚಾಪುರಕ್ಕೆ ಬಂದಿದ್ದ ವೇಳೆ ಮತ್ತೊಂದು ವಾಹನದಲ್ಲಿ ಬಂದ ಪತಿ ಹಾಲಪ್ಪ, ಪತ್ನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಪತ್ನಿಗೆ ಹಿಂದಿನಿಂದ ಬಂದು ಚಾಕು ಇರಿದು ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಲಪ್ಪ ನಿತ್ಯ ಮದ್ಯ ಕುಡಿದು ಬಂದು ಪತ್ನಿಗೆ ಹೊಡೆಯುವುದು, ಕಿರಿಕುಳ ನೀಡುತ್ತಿದ್ದನಂತೆ. ಇದರಿಂದ ನೊಂದ ಪತ್ನಿ ತವರು ಮನೆ ಸೇರಿದ್ದರೂ ಅಲ್ಲಿಗೆ ಬಂದು ಜಗಳವಾಡುತ್ತಿದ್ದನಂತೆ. ಇದೀಗ ಪತ್ನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಗಾಯಗೊಂಡ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಾರಾಯಿ ಕುಡಿದು ಉದ್ದವ್ವನ ಜೊತೆಗೆ ಹಾಲಪ್ಪ ನಿತ್ಯ ಜಗಳವಾಡುತ್ತಿದ್ದ. ಹಾಗಾಗಿ, ಈಗ ನಾಲ್ಕು ದಿನಗಳ ಹಿಂದೆಯಷ್ಟೇ ವಿಚ್ಛೇದನವಾಗಿದೆ. ಇಂದು ಬೆಳಗ್ಗೆ ನಾವು ಬೈಕ್ನಲ್ಲಿ ಮೂವರು ಪಾಶ್ಚಾಪುರ ಸಂತೆಗೆ ಹೋಗುತ್ತಿದ್ದೆವು . ಈ ವೇಳೆ ಹಿಂದಿನಿಂದ ಬಂದ ಹಾಲಪ್ಪ, ಉದ್ದವ್ವನ ಬೆನ್ನಿಗೆ ಚಾಕುವಿನಿಂದ ಚುಚ್ಚಿ ಓಡಿ ಹೋದ ಎಂದು ಘಟನೆ ಕುರಿತು ಉದ್ದವ್ವ ಅವರ ಸಂಬಂಧಿ ಕಮಲವ್ವ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.