ದಾವಣಗೆರೆ:ಬೆಣ್ಣೆನಗರಿಯಲ್ಲಿ ಸೂರ್ಯನ ತಾಪ ಹೆಚ್ಚಾಗತೊಡಗಿದೆ. ಈಗಲೇ ಬಿಸಿಲ ಝಳ ತಡೆಯಲಾಗದೇ ಜಿಲ್ಲೆಯ ಜನತೆ ಕಲ್ಲಂಗಡಿ ಹಣ್ಣಿನ ಹಿಂದೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕಲ್ಲಂಗಡಿಗೆ ಡಿಮ್ಯಾಂಡ್ ಶುರುವಾಗಿದೆ. ಆದರೆ, ಸ್ಥಳೀಯ ಕಲ್ಲಂಗಡಿಗಳು ಈ ಬಾರಿ ಫಸಲು ಬಾರದ ಕಾರಣ ತಮಿಳುನಾಡಿನ ನಾಮಧಾರಿ-295, ಸುಪ್ರೀತ್, ಕಿರಣ್ ತಳಿಯ ಕಲ್ಲಂಗಡಿ ಹಣ್ಣುಗಳ ದರ್ಬಾರ್ ಆರಂಭವಾಗಿದೆ.
ಬಿಸಿಲಿನ ಹೊಡತಕ್ಕೆ ಕಲ್ಲಂಗಡಿ ಹಣ್ಣಿನ ದರ ಕಳೆದ ವರ್ಷಕ್ಕಿಂತ ಕೊಂಚ ಏರಿಕೆ ಕಂಡಿದೆ. ನಿನ್ನೆ ಶಿವರಾತ್ರಿ ಹಬ್ಬದ ಹಿನ್ನೆಲೆ ಜನ ಖರೀದಿಗೆ ಮುಗಿ ಬಿದ್ದಿದ್ದರು.
ಬೇಡಿಕೆ ಜತೆಗೆ ಬೆಲೆ ಅಧಿಕ:ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆದಿದ್ದರಿಂದ ಅಂದುಕೊಂಡಷ್ಟು ಮಾರುಕಟ್ಟೆಗೆ ಪೂರೈಕೆಯಾಗಿಲ್ಲ. ಅಲ್ಲದೇ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಆವಕದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ವಾಟರ್ಮೆಲನ್ಗೆ ಬೇಡಿಕೆ ಜತೆಗೆ ಬೆಲೆಯೂ ಏರಿದೆ. ನಿನ್ನೆ ಶಿವರಾತ್ರಿ ಹಿನ್ನೆಲೆ ಒಂದು ವಾರದ ಹಿಂದೆಯೇ ಜಿಲ್ಲೆಗೆ ಸ್ಥಳೀಯ ಕಲ್ಲಂಗಡಿ ಹಣ್ಣಿನ ಬದಲಿಗೆ ತಮಿಳುನಾಡಿನ ಕಲ್ಲಂಗಡಿ ಮಾರುಕಟ್ಟೆಗೆ ಕಾಲಿಟ್ಟಿದೆ.
ಮಾರಾಟಗಾರ ರಫೀಕ್ ಅಭಿಪ್ರಾಯ: "ಬಿಸಿಲು ಹೆಚ್ಚಿರುವ ಕಾರಣ ಫಸಲು ಹೊರಗೆ ಹೋಗುತ್ತಿದೆ. ಆದ್ದರಿಂದ ದರ ಏರಿಕೆ ಆಗಿದೆ. ಕಳೆದ ಬಾರಿಗಿಂತ ಈ ಬಾರಿ 5-6 ರೂಪಾಯಿ ಏರಿಕೆ ಆಗಿದೆ. ಆದರೂ ನಾವು ಹಣ್ಣನ್ನು ಲೆಕ್ಕಕ್ಕೆ ಮಾರಾಟ ಮಾಡುತ್ತಿದ್ದೇವೆ. 150, 200, 300 ರೂಪಾಯಿ ಹೀಗೆ ಒಂದು ಹಣ್ಣಿನಂತೆ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣು ತಮಿಳುನಾಡಿನ ದಿಂಡಿವರಂ, ಸಿಂಜೀ, ಕೃಷ್ಣಗಿರಿಯಿಂದ ದಾವಣಗೆರೆಗೆ ಆಮದು ಮಾಡಿಕೊಳ್ಳಲಾಗಿದೆ. ನಾಮಧಾರಿ 295, ಸುಪ್ರೀತ್, ಕಿರಣ್, ತಳಿಯ ಹಣ್ಣು ಬಂದಿದ್ದು, ಜನ ಖರೀದಿ ಮಾಡುತ್ತಿದ್ದಾರೆ".