ದೇವನಹಳ್ಳಿ(ಬೆಂಗಳೂರು):ಸಾಲ ಮರುಪಾವತಿಸದ ವೃದ್ಧೆಯ ಮನೆಗೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಬೀಗ ಜಡಿದು ಸೀಲ್ ಹಾಕಿದ್ದಾರೆ. ಇದರಿಂದಾಗಿ ಮನೆಯೊಳಗೆ ಕುರಿ ಮತ್ತು ಮೇಕೆಗಳು ಬಂಧಿಯಾಗಿವೆ. ಕಳೆದ ಎರಡು ತಿಂಗಳಿನಿಂದಲೂ ಮನೆಯ ಛಾವಣಿಯಿಂದಲೇ ಅವುಗಳಿಗೆ ಮೇವು ಹಾಕಲಾಗುತ್ತಿದೆ!.
ದೇವನಹಳ್ಳಿ ತಾಲೂಕಿನ ವಿಜಯಪುರದ ಚೌಡೇಶ್ವರಿ ಸರ್ಕಲ್ ಸಮೀಪ ವಾಸವಾಗಿರುವ ಜಯಲಕ್ಷ್ಮಮ್ಮ (65) ಖಾಸಗಿ ಫೈನಾನ್ಸ್ನವರ ಕಠಿಣ ಕ್ರಮದಿಂದಾಗಿ ಕಣ್ಣೀರಿಡುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಲಕ್ಷ್ಮಮ್ಮ, "2021ರ ಕೋವಿಡ್ ಸಮಯದಲ್ಲಿ ನನ್ನ ಪತಿ ನಾಗಪ್ಪ ಅನಾರೋಗ್ಯಕ್ಕೆ ತುತ್ತಾದರು. ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲಿಸಿದ್ದೆವು. ನಮಗೆ ಯಾರಿಂದಲೂ ಹಣದ ಸಹಾಯ ಸಿಗಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಖಾಸಗಿ ಫೈನಾನ್ಸ್ನಿಂದ 2.50 ಲಕ್ಷ ಸಾಲ ತೆಗೆದುಕೊಂಡೆವು. ಇಲ್ಲಿಯವರೆಗೂ 2.30 ಲಕ್ಷ ರೂ ಮರುಪಾವತಿ ಮಾಡಿದ್ದೇವೆ. ಆದರೆ, ಫೈನಾನ್ಸ್ ಬಡ್ಡಿ ಮತ್ತು ಇತರೆ ಶುಲ್ಕ ಸೇರಿ 3 ಲಕ್ಷ ಹಣ ಕಟ್ಟುವಂತೆ ಹೇಳುತ್ತಿದ್ದಾರೆ. ಯಾವುದೇ ನೋಟಿಸ್ ನೀಡದೆ, ಏಕಾಏಕಿ ಪೊಲೀಸರೊಂದಿಗೆ ಬಂದ ಫೈನಾನ್ಸ್ ಸಿಬ್ಬಂದಿ 14 ವರ್ಷದ ಮೊಮ್ಮಗಳನ್ನು ಮನೆಯಿಂದ ಹೊರಹಾಕಿ, ಬೀಗ ಹಾಕಿದ್ದಾರೆ. 1.50 ಲಕ್ಷ ಹಣ ಕೊಟ್ಟರೆ ಮಾತ್ರ ಬೀಗ ತೆಗೆಯುವುದಾಗಿ ಹೇಳುತ್ತಿದ್ದಾರೆ" ಎಂದು ದೂರಿದರು.