ಕರ್ನಾಟಕ

karnataka

ETV Bharat / state

ಮೆಕ್ಕಾ, ಮದೀನಾ ಉಮ್ರಾ ಯಾತ್ರೆಗೆ ಹೊರಟ ಮುಸ್ಲಿಂ ದಂಪತಿ: ಸತ್ಕರಿಸಿ, ಬೀಳ್ಕೊಟ್ಟ ಹಿಂದೂ ಧರ್ಮಿಯರು

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ತಮ್ಮ ನಿವಾಸದಲ್ಲಿ ಉಮ್ರಾ ಯಾತ್ರೆಗೆ ಹೊರಟಿರುವ ಮುಸ್ಲಿಂ ದಂಪತಿಯನ್ನು ಸತ್ಕರಿಸಿ, ಬೀಳ್ಕೊಟ್ಟರು.

Hindus farewell to Muslim couple who go for Mecca and Madina Umrah pilgrimage
ಮೆಕ್ಕಾ, ಮದೀನಾ ಉಮ್ರಾ ಯಾತ್ರೆಗೆ ಹೊರಟ ಮುಸ್ಲಿಂ ದಂಪತಿ: ಸತ್ಕರಿಸಿ, ಬೀಳ್ಕೊಟ್ಟ ಹಿಂದೂ ಧರ್ಮೀಯರು (ETV Bharat)

By ETV Bharat Karnataka Team

Published : Nov 7, 2024, 5:21 PM IST

ದಾವಣಗೆರೆ: ಸದ್ಯ ರಾಜ್ಯದಲ್ಲಿ ವಕ್ಫ್ ಆಸ್ತಿಯದ್ದೇ ಚರ್ಚೆ ಜೋರಾಗಿದೆ.‌ ಅಲ್ಲದೆ ವಕ್ಫ್ ಆಸ್ತಿ ವಿಚಾರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ​ಗಲಾಟೆ ಕೂಡ ನಡೆದಿದೆ. ಇದಕ್ಕೆ ತದ್ವಿರುದ್ಧವಾಗಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಿಂದೂಗಳು ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಹೌದು, ಮೆಕ್ಕಾ ಮತ್ತು ಮದೀನಾದ ಪವಿತ್ರ ಉಮ್ರಾ ಯಾತ್ರೆಗೆ ಹೊರಟ ಮುಸ್ಲಿಂ ದಂಪತಿಗೆ ಹಿಂದೂ ಧರ್ಮೀಯರು, ಸತ್ಕರಿಸಿ ಬೀಳ್ಕೊಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಹರಿಹರ ನಗರದ ಜೆ. ಸಿ. ಬಡಾವಣೆಯ ಲೇಬರ್‌ ಕಾಲೊನಿಯ ಕಾರ್ಮಿಕ ಮುಖಂಡ ಹೆಚ್. ಕೆ. ಕೊಟ್ರಪ್ಪ ಅವರು ತಮ್ಮ ನಿವಾಸದಲ್ಲಿ ಉಮ್ರಾ ಯಾತ್ರೆಗೆ ಹೊರಟಿರುವ ಮುಸ್ಲಿಂ ದಂಪತಿ ಸೈಯದ್ ಅಜೀಜ್, ನೂರ್ ಜಹಾನ್ ಹಾಗು ಮೊಮ್ಮಗ ಇರಹಾಂ ಅವರನ್ನು ಬುಧವಾರ ಸತ್ಕರಿಸಿ ಬೀಳ್ಕೊಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಚ್. ಮಲ್ಲೇಶ್, ದಲಿತ ಮುಖಂಡ ಎಸ್. ಹೆಚ್. ಕೊಟ್ರೇಶ್, ಕವಿತಾ ಸನಾದಿ, ಕನ್ನಡ ಪರ ಸಂಘಟನೆಯ ಶ್ರೀನಿವಾಸ್ ಕೊಡ್ಲಿ, ಪ್ರವೀಣ್‌, ಚಂದ್ರಮ್ಮ ಕೊಟಗಿ ಸೇರಿ ವಿಶೇಷ ಕಾರ್ಯಕ್ರಮ ಮಾಡುವ ಮೂಲಕ ಯಾತ್ರಾರ್ಥಿಗಳಿಗೆ ಶುಭ ಕೋರಿದರು.

ಏನಿದು ಉಮ್ರಾ ಯಾತ್ರೆ: ಮುಸ್ಲಿಂ ಬಾಂಧವರು ಸೌದಿಯಲ್ಲಿರುವ ಮೆಕ್ಕಾ ಹಾಗು ಮದೀನಾವನ್ನು ಪವಿತ್ರ ಸ್ಥಳವೆಂದು ನಂಬುತ್ತಾರೆ. ಈ ಸ್ಥಳಕ್ಕೆ ತೆರಳಬೇಕು ಎಂಬುದು ಮುಸ್ಲಿಂ ಸಮುದಾಯದ ಪ್ರತಿಯೊಬ್ಬರ ಆಸೆಯಾಗಿಗಿರುತ್ತದೆ.‌ ಬಕ್ರೀದ್​ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳುವ 45 ದಿನಗಳ ಯಾತ್ರೆ ಹಜ್ ಯಾತ್ರೆ ಎನಿಸಿಕೊಂಡರೆ, ಬೇರೆ ಅವಧಿಯಲ್ಲಿ 15 ದಿನ ಕೈಗೊಳ್ಳುವ ಯಾತ್ರೆಗೆ ಉಮ್ರಾ ಯಾತ್ರೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮೆಕ್ಕಾ, ಮದೀನಾ ನಗರಗಳು ಹಾಗೂ ಸುತ್ತಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

ಈ ಕುರಿತು ಹೆಚ್. ಕೆ. ಕೊಟ್ರಪ್ಪ ಪ್ರತಿಕ್ರಿಯಿಸಿ, "ವಿವಿಧತೆಯಲ್ಲಿ ಏಕತೆ ಈ ನೆಲದ ಗುಣ. ಈ ನೆಲದ ಮೇಲೆ ವಾಸ ಮಾಡುವವರೆಲ್ಲರೂ ಭಾರತೀಯರು. ನಮ್ಮ ನಮ್ಮ ಧರ್ಮಗಳನ್ನು ಗೌರವಿಸುವುದು, ಬೆಳೆಸುವುದರ ಜೊತೆಗೆ ಅನ್ಯಧರ್ಮಗಳಿಗೂ ಗೌರವ ಕೊಡುವುದು, ಅನ್ಯೋನ್ಯತೆಯಿಂದ ಇರುವುದು ಇಲ್ಲಿಯ ಸಂಸ್ಕಾರ. ಹಾಗಾಗಿ ಉಮ್ರಾ ಯಾತ್ರಿಗಳಿಗೂ ಶುಭ ಕೋರಿ ಕಳುಹಿಸುತ್ತಿರುವುದು ಸೌಹಾರ್ದತೆಯ ಸಂಕೇತ" ಎಂದು ಹೇಳಿದರು.

ಇದನ್ನೂ ಓದಿ:ರೇಣುಕಾ ಯಲ್ಲಮ್ಮನ ಪಡ್ಡಲಗಿ ತುಂಬಿಸಲು ದೇವಗಿರಿಯಿಂದ ಸವದತ್ತಿಗೆ ಬಂಡಿ ಯಾತ್ರೆ ಕೈಗೊಂಡ ಮುಸ್ಲಿಂ ಭಕ್ತ

ABOUT THE AUTHOR

...view details