ಮೈಸೂರು :ಮೈಸೂರು ಪ್ರವಾಸಿಗರ ತಾಣವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನೂತನ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೊದಲ ಮಾಧ್ಯಮಗೋಷ್ಟಿಯಲ್ಲಿ ಹೇಳಿಕೆ ನೀಡಿದರು.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಸಹಕಾರ ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡಿ, ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ ಎಂದರು.
ಮೈಸೂರು ಪ್ರವಾಸಿಗರ ತಾಣವಾಗಿರುವ ಕಾರಣ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಹಾಗೂ ಮೈಸೂರು ಪಾರಂಪರಿಕ ಕಟ್ಟಡಗಳ ನಗರವಾಗಿದೆ. ಹಾಗಾಗಿ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ನೆಲಸಮ ಮಾಡುವ ಅವಶ್ಯಕತೆಯಿಲ್ಲ. ಹಾಗೆ ಅದನ್ನು ಅಭಿವೃದ್ಧಿ ಮಾಡಬಹುದು. ಚಾಮುಂಡಿ ಬೆಟ್ಟ ನೈಸರ್ಗಿಕವಾಗಿದೆ. ಈ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಮೈಸೂರು ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಕೈಗಾರಿಕಾ ಅಭಿವೃದ್ಧಿ ಮಾಡುತ್ತೇನೆ. ಜನರು ನನ್ನನ್ನು ಕುವೆಂಪು ನಗರದ ಕಚೇರಿಯಲ್ಲಿ ಭೇಟಿ ಮಾಡಬಹುದು ಎಂದು ಯದುವೀರ್ ತಿಳಿಸಿದರು.