ಬೆಂಗಳೂರು:ಕರ್ನಾಟಕ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಮೈಕಲ್ ಸಲ್ಡಾನಾ ಅವರ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ಹೈಕೋರ್ಟ್ ಸೋಮವಾರ ರದ್ದುಪಡಿಸಿ ಆದೇಶಿಸಿದೆ.
ಎಂ.ಪಿ.ನರೋಣ ಎಂಬವರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆರೋಪದಡಿ ವಿಚಾರಣಾಧೀನ ನ್ಯಾಯಾಲಯ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಸಲ್ಡಾನ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಪ್ರಕರಣದಲ್ಲಿ ಸಲ್ಡಾನಾ ಅವರು ಬೇಷರತ್ ಕ್ಷಮೆ ಮತ್ತು ಪ್ರಕರಣ ಮುಂದುವರಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ನೀಡಿದ್ದಾರೆ. ಇದನ್ನು ಪರಿಗಣಿಸಿ ಪ್ರಕರಣ ರದ್ದುಪಡಿಸಿರುವುದಾಗಿ ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ:ಮಂಗಳೂರಿನ ನಿವಾಸಿ ಬ್ಯಾಪ್ಟಿಸ್ಟ್ ಡಿಸೋಜಾ ಅವರ ನಿವಾಸವನ್ನು ಸೇಂಟ್ ಅಲೋಸಿಯಸ್ ಕಾಲೇಜಿನ ಜೆಸ್ಯೂಟ್ ಪ್ರೀಸ್ಟ್ಸ್ ಎಂಬವರು ಕೆಡವಿ ಅನ್ಯಾಯ ಮಾಡಿದ್ದಾರೆ ಎಂದು ಸಲ್ಡಾನಾ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದರು. ಪೊಲೀಸರು ವಿಫಲವಾಗಿದ್ದರಿಂದ ಡಿಸೋಜಾ ಅವರ ಆಸ್ತಿಗೆ ಹಾನಿಯಾಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ವಕೀಲ ನರೋನಾ ಅವರು, ಈ ಸುದ್ದಿಗೋಷ್ಠಿಯಿಂದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದೆ ಎಂದು ಆರೋಪಿಸಿದ ಅವರು ಪೊಲೀಸರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದರ ಸಂಜ್ಞೆ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯ ಸಲ್ಡಾನಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ಬಿ ವರದಿ ಸಲ್ಲಿಸಿದ್ದರು.
ಪೊಲೀಸರ ಬಿ ವರದಿಯನ್ನು ಪ್ರಶ್ನಿಸಿ ನರೋನಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಿಚಾರಣಾಧೀನ ನ್ಯಾಯಾಲಯ, ಸಲ್ಡಾನಾ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದನ್ನು ವಜಾ ಮಾಡುವಂತೆ ಕೋರಿ ಸಲ್ಡಾನಾ ಮತ್ತು ಪಿ.ಬಿ.ಡಸಾ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಪವರ್ ಬ್ಯಾಂಕ್ ಹಗರಣ: ಚೀನಾ ಆರೋಪಿಗೆ ಸ್ವದೇಶಕ್ಕೆ ತೆರಳಲು ಅನುಮತಿ ನಿರಾಕರಿಸಿದ ಹೈಕೋರ್ಟ್ - Power Bank scam