ಬೆಂಗಳೂರು:ಕುರಾನ್ ಮತ್ತು ಪ್ರವಾದಿ ಮಹಮ್ಮದ್ ಅವರ ಸಂದೇಶಗಳನ್ನು ತಿಳಿಸುತ್ತಾ ಮತಾಂತರ ಮಾಡುವುದಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಮತಾಂತರ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಬಳ್ಳಾರಿಯ ಸಿರುಗುಪ್ಪದ ತಕ್ಕಲಕೋಟ ನಿವಾಸಿಗಳಾದ ಹುಸೇನ್ ಬಾಷ್ ನಬೀಸಾಬ್ ಮತ್ತು ಸಾಯಿಬಾಬ ರಾಜಾಸಾಬ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 ಸೆಕ್ಷನ್ 3ರ ಪ್ರಕಾರ ಬಲವಂತ, ವಂಚನೆ, ಅನಗತ್ಯ ಪ್ರಭಾವ ಆಮಿಷ ಮತ್ತು ಮದುವೆಯಾಗುವುದಾಗಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವುದಕ್ಕೆ ಯತ್ನಿಸುವಂತಿಲ್ಲ ಎಂದು ತಿಳಿಸಲಾಗಿದೆ. ಜೊತೆಗೆ ಸೆಕ್ಷನ್ 4ರ ಪ್ರಕಾರ ಈ ರೀತಿಯಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಅಂತವರ ಪೋಷಕರು, ಒಡಹುಟ್ಟಿದವರು ಹಾಗೂ ಸಂಬಂಧಿಕರು ಮಾತ್ರ ದೂರು ನೀಡಬಹುದಾಗಿದೆ ಎಂದು ತಿಳಿಸಲಾಗಿದೆ. ಆದರೆ, ಸೆಕ್ಷನ್ 3ನ್ನು ಉಲ್ಲಂಘಿಸಿದವರಿಗೆ ಸೆಕ್ಷನ್ 5ರ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ.
ಆದರೆ, ಈ ಪ್ರಕರಣದಲ್ಲಿ ಕಾಯಿದೆಯಲ್ಲಿ ತಿಳಿಸಿರುವಂತೆ ಸಂಬಂಧಿಕರಲ್ಲದೇ ಮೂರನೇ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಜತೆಗೆ, ದೂರಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಇಲ್ಲವಾಗಿವೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿ ಪೀಠ ಆದೇಶಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ಅನ್ವರ್ ಅಲಿ ನದಾಫ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?: 2024ನೇ ಜುಲೈ 17ರಂದು ಕೇಸರಿ ಧ್ವಜಗಳನ್ನು ಹಿಡಿದು ಬಳ್ಳಾರಿ ಕಡೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿರುವವರನ್ನು ಅರ್ಜಿದಾರರು ಮಾತನಾಡಿಸುತ್ತಾ ಕುರಾನ್ ಪ್ರತಿಗಳನ್ನು ನೀಡಿ, ನಿಮಗೆ ಲಾಭ ನಷ್ಟ ಇರುವುದು ಏಕ ದೇವ ಆರಾಧಿಸಿದಲ್ಲಿ ಮಾತ್ರ ಸಾಧ್ಯ. ಬಸವಣ್ಣವರೂ ಇದನ್ನೇ ಹೇಳಿದ್ದಾರೆ. ಮಹಮ್ಮದ್ ಪೈಗಂಬರ್ ಸಹ ಅದನ್ನೇ ತಿಳಿಸಿದ್ದಾರೆ. ಖುರಾನ್ ಕೇವಲ ಮುಸ್ಲಿಮರಿಗೆ ಮಾತ್ರವಲ್ಲಿ ಇಡೀ ಮಾನವರಿಗೆ ಸಂದೇಶ ನೀಡಿದೆ. ಕುರಾನ್ 1,450 ವರ್ಷ ಹಳೆಯದಾದರೂ ಮೂಲ ಭಾಷೆಯಿಂದ ಒಂದು ಪದವನ್ನೂ ಬದಲಾವಣೆ ಮಾಡಿಲ್ಲ. ಕುರಾನ್ ಅಧ್ಯಯನ ಮಾಡಿದಾಗ ಜೀವನದ ಮಾರ್ಗದರ್ಶನ ಸಿಗಲಿದೆ. ಇಹಲೋಕ ಮತ್ತು ಪರಲೋಕದಲ್ಲಿ ನೆಮ್ಮದಿ ಮತ್ತು ಸ್ವರ್ಗ ಸಿಗಲಿದೆ ಎಂದು ತಿಳಿಸುತ್ತಿದ್ದರು ಎಂದು ಗಡಿಲಿಂಗಪ್ಪ ಎಂಬುವರು ತಿಕ್ಕಲಕೋಟ ಠಾಣೆಗೆ ದೂರು ದಾಖಲಿಸಿದ್ದರು. ಇದನ್ನು ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ವರದಕ್ಷಿಣೆ ಪಿಡುಗು ಜಾರಿಯಲ್ಲಿರುವುದು ದುರದೃಷ್ಟಕರ, ಈ ಘಟನೆಗಳು ದೇಶದ ಅಭಿವೃದ್ಧಿ ಕಂಟಕ: ಹೈಕೋರ್ಟ್