ಮೈಸೂರು: "ರಾಜ್ಯದ ಎಲ್ಲಾ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದ್ದು, ಎಲ್ಲವನ್ನೂ ಸರಿಪಡಿಸುತ್ತದೆ" ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಿಜೆಪಿಯಲ್ಲಿ ಆಗುತ್ತಿರುವ ಬಣ ಬಡಿದಾಟವನ್ನು ಹೈಕಮಾಂಡ್ ನೋಡುತ್ತಿದೆ. ಎಲ್ಲವೂ ಸರಿಯಾಗುತ್ತದೆ. ನಾವೆಲ್ಲ ಭಾರತೀಯ ಜನತಾ ಪಾರ್ಟಿಗೆ ಸೇರಿದವರು. ಸಣ್ಣಪುಟ್ಟ ಗೊಂದಲ ಅಸಮಾಧಾನವಿದೆ. ಇದೆಲ್ಲವೂ ಆದಷ್ಟು ಬೇಗ ಸರಿಯಾಗುತ್ತೆ. ಅವರವರ ಕೂಟಕ್ಕೆ ತಕ್ಕ ಸ್ಥಾನಮಾನ ಸಿಗುತ್ತೆ" ಎಂದರು.
ಟ್ಯಾಕ್ಸ್ ಹಾಕಿ ಜನರಿಗೆ ಬರೆ : "ಚುನಾವಣೆ ಗೆಲ್ಲುವ ಮುನ್ನ ರಾಜಕಾರಣ ಭಾಷಣ ಮಾಡಿದ್ರು, ಗೆದ್ದ ನಂತರ ಸರ್ಕಾರ ದಲಿತರನ್ನು ಮರೆತಿದೆ. 2023ರ ಸಾಲಿನಲ್ಲಿ 11 ಸಾವಿರ ಕೋಟಿ ದಲಿತರ ಹಣವನ್ನು ಬೇರೆ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರನ್ನು ಭಿಕ್ಷುಕರನ್ನಾಗಿ ಮಾಡಿದೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿ, ಎಲ್ಲದರ ಮೇಲೆ ಟ್ಯಾಕ್ಸ್ ಹಾಕಿ ಜನರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನ ಪೂರ್ಣಗೊಂಡಿಲ್ಲ: "ಮೈಸೂರಿನ ಅಂಬೇಡ್ಕರ್ ಭವನ ಇನ್ನೂ ಪೂರ್ಣ ಆಗಿಲ್ಲ. 10 ವರ್ಷದಿಂದ ಹಾಗೇ ಇದೆ. ನನ್ನ ಅವಧಿಯಲ್ಲಿ ಮಂಜೂರಾತಿ ಮಾಡಿಸಿಕೊಟ್ಟೆ. ಆ ಹಣವನ್ನು ಕೂಡ ಈ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಬಾರಿ ಬಜೆಟ್ನಲ್ಲಿ ನಮ್ಮ ಹಣದ ಒಂದು ರೂಪಾಯಿಯನ್ನು ಬಳಸಬಾರದು. ದಲಿತರ ಹಣವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಬಾರದು. ಗ್ಯಾರಂಟಿಗೆ ನಮ್ಮ ದಲಿತ ಸಮುದಾಯದ ಹಣ ಬಳಸದೆ ನಿಮ್ಮ ದೈರ್ಯ ತೋರಿಸಿ. ನಿಮ್ಮ ಸರ್ಕಾರದಿಂದ ರಾಜ್ಯದ ಜನರಿಗೆ ಏನೂ ಒಳ್ಳೆಯದಾಗಿಲ್ಲ. ನಮ್ಮ ಹಣ ನಮಗೆ ಕೊಡಿ, ನಿಮ್ಮ ಗ್ಯಾರಂಟಿಗೆ ಬೇರೆ ಹಣ ತೆಗೆದಿಡಿ" ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.