ಮಂಗಳೂರು: ತಮಿಳುನಾಡು ಭಾಗದಲ್ಲಿ ಸಾಕಷ್ಟು ಹಾನಿ ಮಾಡಿದ ಫೆಂಗಲ್ ಚಂಡಮಾರುತ ರಾತ್ರಿ ವೇಳೆಗೆ ಮಂಗಳೂರು ಭಾಗದಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಫೆಂಗಲ್ ಚಂಡಮಾರುತ ಸದ್ಯ ಮಂಗಳೂರು ಭಾಗದ ಅರಬ್ಬಿ ಸಮುದ್ರದಲ್ಲಿ ಇದ್ದು, ಬಳಿಕ ಇದು ಸಮುದ್ರದ ಮಧ್ಯೆ ತೆರಳಿ ಕೊನೆಗೊಳ್ಳಲಿದೆ. ಈ ಚಂಡಮಾರುತದ ಪ್ರಭಾವದಿಂದ ಇಂದು ಸಂಜೆಯವರೆಗೆ ಮಳೆಯ ಅಬ್ಬರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಸುರಿದ ಮಳೆಗೆ ಮಂಗಳೂರು ನಗರ ಸಹಿತ ವಿವಿಧೆಡೆ ಜನರು ತತ್ತರಿಸುವಂತಾಗಿದೆ. ಕೊಟ್ಟಾರ ಚೌಕಿ ಪ್ರದೇಶದಲ್ಲಿ ಸೋಮವಾರ ಸಂಜೆ ವೇಳೆ ರಾಜಕಾಲುವೆಗಳು ಉಕ್ಕಿ ಹರಿದು ನೀರು ರಸ್ತೆಗೆ ಬಂದಿದ್ದು, ತಗ್ಗು ಪ್ರದೇಶದಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದವು.
ಇನ್ನು ಪಂಪ್ ವೆಲ್, ಬಜ್ಜೊಡಿ, ಬಜಾಲ್ ಅಂಡರ್ ಪಾಸ್ ಮತ್ತು ಪಡೀಲ್ ಸೇರಿ ಹಲವೆಡೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನೂ ಅರಬ್ಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗದೇ ದೋಣಿಗಳು ದಡ ಸೇರಿದೆ. ಸದ್ಯ ಸಮುದ್ರವು ಕೂಡ ಪ್ರಕ್ಷುಬ್ದವಾಗಿದೆ.
ಎರಡು ಸಾವು:ಪುತ್ತೂರಿನಲ್ಲಿ ವಿದ್ಯುತ್ ಶಾಕ್ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರೆ, ಬೆಳ್ತಂಗಡಿಯಲ್ಲಿ ನೀರಿನಲ್ಲಿ ಒಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಪುತ್ತೂರಿನ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ನಾರಯಣ (45) ವಿದ್ಯುತ್ ಶಾಕ್ನಿಂದ ಮೃತಪಟ್ಟವರು. ಇನ್ನು ಕಾಲು ಜಾರಿ ನದಿಗೆ ಬಿದ್ದು ಆರ್ಎಸ್ಎಸ್ ಪ್ರಚಾರಕ ಪ್ರಸಾದ್ ಎಂಬವರು ಸಾವನ್ನಪ್ಪಿದ್ದಾರೆ. ತನ್ನ ಸಂಬಂಧಿಕರ ಜೊತೆಗೆ ನದಿ ಬಳಿಗೆ ಬಂದಿದ್ದ ಅವರು ಕಾಲು ಜಾರಿ ಬಿದ್ದಿದ್ದಾರೆ.