ಬೆಂಗಳೂರು:ದೇವೇಗೌಡರು ತಮ್ಮ ಇಡೀ ರಾಜಕೀಯ ಬದುಕನ್ನು ಪ್ರಜ್ವಲ್ ಬೆಳೆಯಬೇಕು ಎಂದು ಧಾರೆ ಎರೆದಿದ್ದಾರೆ. ಪ್ರಜ್ವಲ್ ನೀನು ಎಲ್ಲೇ ಇದ್ದರೂ ಮುಂದಿನ 24 ಅಥವಾ 48 ಗಂಟೆಯೊಳಗೆ ದೇಶಕ್ಕೆ ವಾಪಸ್ ಬರುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಮತ್ತು ದೇವೇಗೌಡರಿಗೆ ಗೌರವ ತಂದುಕೊಡಪ್ಪ ಎಂದು ನಾನು ಮಾಧ್ಯಮದವರ ಮೂಲಕ ಮನವಿ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಏನಾಗುತ್ತದೆ, ಯಾಕೆ ಹೆದರ ಬೇಕು. ಈ ನೆಲದ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ನನ್ನ ಕಾರ್ಯಕರ್ತರು ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಅವರ ದುಡಿಮೆಯಿಂದ ನಾವು ನಿಮ್ಮ ಮುಂದೆ ಕೂತು ಮಾತನಾಡುತ್ತಿದ್ದೇವೆ. ಈ ನಾಡಿನ ಲಕ್ಷಾಂತರ ಜನ ನಮ್ಮ ಪಕ್ಷಕ್ಕೆ ಮತ ಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದ ಇಲ್ಲಿಯವರೆಗೆ ಬೆಳೆದಿದ್ದೇವೆ. ಎಷ್ಟು ದಿನ ಹೀಗೆ ಹೊರಗೆ ಇರಬೇಕು?. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಪ್ರಜ್ವಲ್ ರೇವಣ್ಣಗೆ ಕೈ ಜೋಡಿಸಿ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ ಎಂದರು.