ಹುಬ್ಬಳ್ಳಿ:ದಿಂಗಾಲೇಶ್ವರ ಸ್ವಾಮೀಜಿ ನನ್ನನ್ನು ಸಂಪರ್ಕಿಸಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಸ್ವಾಮೀಜಿಗಳು ರಾಜಕೀಯಕ್ಕೆ ಬರುವುದು ತಪ್ಪೇನಿಲ್ಲ. ಆದ್ರೆ ರಾಜಕೀಯ ಪ್ರವೇಶಿಸಲು ಸಮಯ ಸರಿಯಿಲ್ಲ ಎಂದು ಹೇಳಿದ್ದೇನೆ ಎಂದು ವರೂರು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.
ಚುನಾವಣೆಯಲ್ಲಿ ಸೋತರೆ ಮಠದ ಗೌರವಕ್ಕೆ ಧಕ್ಕೆ:ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರ ದೊಡ್ಡದಾಗಿದ್ದು, 546 ಹಳ್ಳಿಗಳನ್ನು ಒಳಗೊಂಡಿದೆ. ಅಲ್ಪ ಸಮಯದಲ್ಲಿ ಹಳ್ಳಿಗಳನ್ನು ಸಂಪರ್ಕಿಸಲು ಅಸಾಧ್ಯ. ಇದು ಅವರಿಗೆ ಕಷ್ಟವಾಗಿ, ಚುನಾವಣೆಯಲ್ಲಿ ಸೋತರೆ ಮಠದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿದ್ದೇನೆ. ಆದ್ರೆ ಅವರು ಸೋತರೂ ಸರಿ, ಗೆದ್ದರೂ ಸರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಅದು ಅವರ ನಿರ್ಧಾರ ಎಂದು ತಿಳಿಸಿದರು.
ಫಕೀರ ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶ ಮಾಡಿದ ಸಮಯ ಮತ್ತು ಜಾಗ ಸರಿಯಿಲ್ಲ. ಇದು ಶಿರಹಟ್ಟಿಯ ಫಕೀರೇಶ್ವರ ಮಹಾ ಸಂಸ್ಥಾನದ ಅಸ್ತಿತ್ವದ ಪ್ರಶ್ನೆಯಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ದೊಡ್ಡ ಧರ್ಮಗುರುಗಳು. ವೈಯಕ್ತಿಕ ಸಮಸ್ಯೆಗಳು ಹಾಗೂ ಅವರ ಸಮಾಜಕ್ಕೆ ಅನ್ಯಾಯವಾಗಿದ್ದರೆ ಅದನ್ನು ಹಿರಿಯರೊಂದಿಗೆ ಕುಳಿತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ಹೇಳಿದರು.