ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ 90 ಕೆ.ಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ನಗರದ ಜಿಎಫ್ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆಗಳು ಪ್ರಕ್ರಿಯೆ ನಡೆಯಿತು.
ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರರಾದ ರಾಘವೇಂದ್ರ ಅವರು ಜಿಎಫ್ಜಿಸಿ ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದು, ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿದ್ದರು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಬೈಸೆಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಿರಾಣಿ ಅಂಗಡಿ ಮಾಲೀಕನ ಪುತ್ರ (ETV Bharat) ಈ ಮೂಲಕ ರಾಘವೇಂದ್ರ ಅವರು, ಬರುವ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಘವೇಂದ್ರ ಅವರಿಗೆ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ದೇಹದಾರ್ಢ್ಯಪಟು ರಾಘವೇಂದ್ರ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, "ಜಿಎಫ್ಜಿಸಿ ಕಾಲೇಜಿನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 90 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದೇನೆ. ಈ ಮೂಲಕ ಮಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ. ನಮ್ಮದೇ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಪೋಷಕರಿಗೆ ನೆರವಾಗುತ್ತಿದ್ದೇನೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ಖರ್ಚಾಗುತ್ತದೆ. ದೇಹ ಹುರಿಗೊಳಿಸಲು ಚಿಕನ್, ತರಕಾರಿ, ಮೊಟ್ಟೆ, ಪ್ರೋಟಿನ್ ಸೇವಿಸಬೇಕು. ಇದಕ್ಕೆ ಪ್ರತಿದಿನ 800 ರಿಂದ 1000 ರೂ ಖರ್ಚಾಗುತ್ತದೆ" ಎಂದರು.
ತರಬೇತುದಾರ ಮಧು ಪೂಜಾರ್ ಮಾತನಾಡಿ, "ಕಠಿಣ ಕ್ರೀಡೆ ಎಂದರೆ ಅದು ಬಾಡಿ ಬಿಲ್ಡಿಂಗ್. ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಘವೇಂದ್ರ ಚಿನ್ನದ ಪದಕ ಗೆದ್ದು, ಮಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ದೇಹದಾರ್ಢ್ಯ ಸ್ಪರ್ಧೆಗೆ ಡಯೆಟ್ ಮಾಡುವುದೇ ದೊಡ್ಡ ಕೆಲಸ. ರಾಷ್ಟ್ರಮಟ್ಟದಲ್ಲಿ ಮೆಡಲ್ ಗೆಲ್ಲುವುದಕ್ಕೆ ಪ್ರಯತ್ನ ಮಾಡ್ತೇವೆ. ರಾಘವೇಂದ್ರ ಬೆಳೆಗ್ಗೆ ಎರಡ್ಮೂರು ಗಂಟೆ, ಸಂಜೆ ಎರಡ್ಮೂರು ಗಂಟೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟಕ್ಕೆ ದಾವಣಗೆರೆಯಿಂದ ನಾಲ್ಕು ಜನ ದೇಹದಾರ್ಢ್ಯ ಪಟುಗಳು ಆಯ್ಕೆಯಾಗಿದ್ದಾರೆ" ಎಂದರು.
ಇದನ್ನೂ ಓದಿ:ಫೆಂಗಲ್ ಚಂಡಮಾರುತದ ಎಫೆಕ್ಟ್: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತದ ಕಟಾವು