ದಾವಣಗೆರೆ: ದಾವಣಗೆರೆಯ ಗೋಪಾಲ್ ಗೌಡ್ರು ನಿರುದ್ಯೋಗಿ ಯುವಕರ ಪಾಲಿನ ಅನ್ನದಾತ. ಸಾವಿರಾರು ಯುವಕರಿಗೆ ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ಉಪನ್ಯಾಸ ನೀಡಿ ತರಬೇತಿ ಕೊಟ್ಟು ಅವರು ಬದುಕು ಕಟ್ಟಿಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಾರೆ. ಇವರ ಬಳಿ ತರಬೇತಿ ಪಡೆದ ಯುವಕರು ಗಲ್ಫ್ ದೇಶಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಷ್ಠಿತ ಕಂಪನಿಗಳಲ್ಲಿ ಟೆಕ್ನಿಷಿಯನ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಾವಣಗೆರೆ ನಗರದ ಎಂಸಿಸಿಬಿ ಬ್ಲಾಕ್ ನಿವಾಸಿ ಗೋಪಾಲ್ ಗೌಡ ಅವರು ಅಪ್ಪಟ ಪರಿಸರವಾದಿ. ಎಲ್ಲಿ ಮರಗಳಿಗೆ ಕೊಡಲಿ ಬೀಳುತ್ತದೆಯೋ ಅಲ್ಲಿ ಈ ಗೋಪಾಲ್ ಗೌಡ್ರು ಹಾಜರಿರುತ್ತಾರೆ. ನೂರಾರು ಗಿಡ ಮರಗಳನ್ನು ಪೋಷಿಸಿ ಬೆಳೆಸಿರುವ ಇವರು ಇದೀಗ ನಿರುದ್ಯೋಗಿ ಯುವಕರ ಬದುಕನ್ನೇ ಬದಲಾಯಿಸಿದ್ದಾರೆ. ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ತರಬೇತಿ ನೀಡುವ ಗೋಪಾಲ್ ಗೌಡ್ರ ಬಳಿ ಸಾವಿರಾರು ಯುವಕರು ತರಬೇತಿ ಪಡೆದಿದ್ದಾರೆ.
1986ರಲ್ಲಿ ದಾವಣಗೆರೆಗೆ ಆಗಮಿಸಿದ ಗೋಪಾಲ್ ಗೌಡ ಅವರು ಕೆಲಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೆಲಸಕ್ಕೆ ಅಲೆದು ಅಲೆದು ಸಾಕಾಗಿದ್ದ ಗೋಪಾಲ್ ಗೌಡ್ರು ತಮ್ಮದೇ ಸ್ವತಃ ಉದ್ಯೋಗ ತೆರೆದರು. ನಿರುದ್ಯೋಗ ನಿವಾರಣೆ ಮಾಡಲೇಬೇಕೆಂದು ಪಟ್ಟು ಹಿಡಿದ ಗೋಪಾಲ್ ಗೌಡ ಅವರು ಕೆಲಸ ಕಲಿಯುತ್ತೇನೆ ಎಂದು ಬಂದ ನಿರುದ್ಯೋಗಿ ಯುವಕರಿಗೆ ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ಗುಣಮಟ್ಟದ ತರಬೇತಿ ನೀಡಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ. ಕೆಲವರು ಬೆಳಗ್ಗೆ ಮನೆ ಮನೆ ಪೇಪರ್ ಹಾಕಿ, ಮತ್ತಷ್ಟು ಜನ ಹೋಟೆಲ್ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ ಗೋಪಾಲ್ ಗೌಡ ಅವರ ಬಳಿ ತರಬೇತಿ ಪಡೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ತರಬೇತಿ ಪಡೆದವರು ವಿದೇಶಿ ಕಂಪನಿಗಳಲ್ಲಿ ಉದ್ಯೋಗಿಗಳು:1996-98ರಲ್ಲಿ ನಿರುದ್ಯೋಗ ನಿವಾರಣೆ ಮಾಡಬೇಕೆಂದು ಗೋಪಾಲ್ ಗೌಡ ಅವರು ದಾವಣಗೆರೆ ನಗರದ ಡಿಆರ್ಆರ್ ಪಾಲಿಟೆಕ್ನಿಕ್, ಜನ ಶಿಕ್ಷಣ ಸಂಸ್ಥೆಯಲ್ಲಿ ಯುವಕರಿಗೆ ತರಬೇತಿ ನೀಡಲು ಆರಂಭಿಸಿದರು. ಅಲ್ಲದೇ ತಮ್ಮ ಶಾಪ್ನಲ್ಲೂ ಯುವಕರು ತರಬೇತಿ ಪಡೆಯಬಹುದಿತ್ತು. ಇವರ ಬಳಿ ತರಬೇತಿ ಪಡೆದವರು ದೂರದ ಗಲ್ಫ್ ದೇಶಗಳಾದ ದುಬೈ, ಸೌದಿ ಅರೇಬಿಯಾ, ಕತಾರ್, ಮಸ್ಕತ್ ದೇಶಗಳಲ್ಲಿ ಸ್ಯಾಮ್ಸಂಗ್, ಗೋದ್ರೇಜ್ ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.