ಕರ್ನಾಟಕ

karnataka

ETV Bharat / state

2020ರಿಂದ 2023ರವರೆಗಿನ ನಿವೃತ್ತ, ಮಾಜಿ ಉದ್ಯೋಗಿಗಳಿಗೆ ಕೆಎಸ್ಆರ್​​ಟಿಸಿ ಗುಡ್ ನ್ಯೂಸ್!

ಕೆಎಸ್ಆರ್​ಟಿಸಿಯ ಅಂದಾಜು 10,000 ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಳದ ಬಾಕಿ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ksrtc
ಕೆಎಸ್ಆರ್​​ಟಿಸಿ

By ETV Bharat Karnataka Team

Published : Mar 8, 2024, 7:19 AM IST

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ(ಕೆಎಸ್ಆರ್​ಟಿಸಿ) 01/01/2020ರಿಂದ 28/02/2023ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10,000 ನೌಕರರಿಗೂ ಶೇಕಡಾ 15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ. ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಹಾಗೂ ಕೆಎಸ್ಆರ್​ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್(ವಾಸು) ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದುಕೊರತೆಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಎಲ್ಲ ಸಂಘಟನೆಗಳು ತಮ್ಮ ತಮ್ಮ ಬೇಡಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯವಾಗಿ, 01/01/2020 ರಿಂದ 28/02/2023 ರವರೆಗಿನ ವೇತನ ಬಾಕಿ ಹಣ, 01/01/2024ರಿಂದ ಮೂಲ ವೇತನ‌ ಹೆಚ್ಚಳ ಹಾಗೂ 01/01/2020 ರಿಂದ 28/02/2023ರವರೆಗಿನ ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರಹೋಗಿರುವ ನೌಕರರ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ಕೆಎಸ್ಆರ್​​ಟಿಸಿ ಸಭೆ

ಅಂತಿಮವಾಗಿ, 01/01/2020ರಿಂದ 28/022023ರವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಹೋಗಿರುವ ಎಲ್ಲ ಅಂದಾಜು 10,000 ನೌಕರರಿಗೂ ಶೇ.15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲು ಕೆಎಸ್ಆರ್​ಟಿಸಿ ವ್ಯವಸ್ಥಾಪಕ‌ ನಿರ್ದೇಶಕರಿಗೆ ಸೂಚಿಸಿದರು. ಈ‌ ಕ್ರಮಕ್ಕಾಗಿ ಎಲ್ಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದು ಸಾರಿಗೆ ಸಚಿವರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದ್ದಾರೆ.

01/01/2024ರಿಂದ ಮಾಡಬೇಕಾಗಿರುವ ವೇತನ ಹೆಚ್ಚಳ‌ದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ''ಮುಂದಿನ‌ ದಿನಗಳಲ್ಲಿ ಹೊಸ ಬಸ್​​ಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಕ್ರಮ ವಹಿಸಲಾಗುವುದು'' ಎಂದು ತಿಳಿಸಿದರು.

''ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ. ಇದು ನಿಮ್ಮ ಸಂಸ್ಥೆ, ಈ‌ ಸಂಸ್ಥೆಗಳನ್ನು‌ ಉಳಿಸಿ‌ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಅದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಿ, ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ತಮ್ಮೆಲ್ಲರ ಸಹಕಾರ ಬೇಕು'' ಎಂದು ಕೋರಿದರು.

ಸಭೆಯಲ್ಲಿ ಕೆಎಸ್ಆರ್​ಟಿಸಿ ಎಂಡಿ ವಿ.ಅನ್ಬುಕುಮಾರ್, ಬಿಎಂಟಿಸಿ ಎಂಡಿ ಆರ್.ರಾಮಚಂದ್ರನ್, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಎಸ್.ಭರತ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಹು ನಿರೀಕ್ಷಿತ ನಮ್ಮ ಮೆಟ್ರೋ ಚಾಲಕರಹಿತ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

ABOUT THE AUTHOR

...view details