ಬೆಂಗಳೂರು:ಬೇಕರಿಯಲ್ಲಿ ಟೀ ಕುಡಿಯುತ್ತಿದ್ದ ಯುವಕರ ಮೇಲೆ ಲಾಠಿಯಿಂದ ಹಲ್ಲೆೆ ನಡೆಸಿದಲ್ಲದೆ, ತನ್ನ ಗನ್‌ಮ್ಯಾನ್‌ನಿಂದ ವ್ಯಕ್ತಿಯೊಬ್ಬನ ಕೊಲೆಗೈಯಲು ಗುಂಡು ಹಾರಿಸಿದ ಆರೋಪದ ಮೇಲೆ ವಕೀಲ ಕೆ.ಎನ್.ಜಗದೀಶ್, ಅವರ ಪುತ್ರ ಸೇರಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ತೇಜಸ್ವಿ ಎಂಬುವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಲೆಗೆ ಯತ್ನ, ಹಲ್ಲೆೆ, ಶಸ್ತ್ರಾಸ್ತ್ರ ಬಳಕೆ ಹಾಗೂ ಇತರೆ ಆರೋಪಗಳ ಅಡಿಯಲ್ಲಿ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿರೂಪಾಕ್ಷಪುರ ನಿವಾಸಿ ಕೆ.ಎನ್.ಜಗದೀಶ್, ಅವರ ಪುತ್ರ ಆರ್ಯ ಜಗದೀಶ್, ಗನ್‌ಮ್ಯಾನ್ ಅಭಿಷೇಕ್ ತಿವಾರಿ ಹಾಗೂ ಕಾರು ಚಾಲಕ ಶುಭಂ ಕುಮಾರ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?: ಜ.24ರಂದು ದೂರುದಾರ ತೇಜಸ್ವಿ ಹಾಗೂ ಇತರೆ ಸ್ಥಳೀಯರು ವಿರೂಪಾಕ್ಷಪುರದ ಆರ್ಚ್ ಬಳಿಯ ಬೇಕರಿಯಲ್ಲಿ ಟೀ ಕುಡಿಯುತ್ತಿದ್ದರು. ಆಗ ಆರೋಪಿಗಳು ಯಾಕೆ ಇಲ್ಲಿ ನಿಂತಿದ್ದಿರಾ? ಮನೆಗೆ ಹೋಗಿ ಎಂದಿದ್ದಾರೆ. ಆಗ ತೇಜಸ್ವಿ ಟೀ ಕುಡಿದು ಹೋಗುತ್ತೇವೆ ಎಂದಿದ್ದಾರೆ. ಆದರೆ, ಆರೋಪಿಗಳು ಏಕಾಏಕಿ, ಎಲ್ಲರೂ ಡ್ರಗ್ಸ್ ಸೇವಿಸಿದ್ದಾರೆ ಎಂದು ಲಾಠಿ ತಂದು ಹಲ್ಲೆೆ ನಡೆಸಿದ್ದಾರೆ. ಆಗ ತೇಜಸ್ವಿ ಹಾಗೂ ಸ್ಥಳೀಯರು ಸೇರಿ ಆರೋಪಿಗಳ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಜಗದೀಶ್ ಮತ್ತು ಇತರೆ ಆರೋಪಿಗಳು ಸಾರ್ವಜನಿಕರ ಮೇಲೆ ಹಲ್ಲೆೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.