ಬೆಂಗಳೂರು: ಸ್ವಾತಂತ್ರ್ಯ ಬಂದ ನಂತರ ಇಷ್ಟು ಕೆಟ್ಟ ಪರೀಕ್ಷೆ ನಡೆದಿರಲಿಲ್ಲ, ಕಾಂಗ್ರೆಸ್ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಅದಃಪತನಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆ ನಡೆದ ರೀತಿ, ಕೈಗೊಂಡ ಕ್ರಮಗಳ ಬಗ್ಗೆ, ಆಗಿರುವ ಲೋಪಗಳ ಬಗ್ಗೆ ಒಂದು ಗಂಭೀರ ತನಿಖೆ ನಡೆಯಬೇಕಿದೆ. ಈ ವಿಚಾರದಲ್ಲಿ ಸರ್ಕಾರ ತಕ್ಷಣ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ್ ಶಹಾಪುರ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಕಳೆದ ಒಂದು ವರ್ಷದಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದ್ವಾನ ಆಗಿದೆ. ಶಾಲಾ ಶಿಕ್ಷಣ ಇಲಾಖೆಯನ್ನು ನಿರ್ವಹಿಸುವಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಫಲ ಆಗಿದ್ದಾರೆ. ಲಕ್ಷಾಂತರ ಮಕ್ಕಳು ಆತಂಕದಲ್ಲಿದ್ದಾರೆ, ಕೆಎಸ್ಇಎಬಿ ಮೂಲಕ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿರುವುದಾಗಿ ಹೇಳಿದ್ದಾರೆ ಸ್ವಾತಂತ್ರ್ಯ ಬಂದ ನಂತರ ಈ ವರ್ಷ ಅತ್ಯಂತ ಕೆಟ್ಟ ಪರೀಕ್ಷೆ ನಡೆದಿದೆ ಎಂದು ಆರೋಪಿಸಿದರು.
ಪಠ್ಯ ಪುಸ್ತಕಗಳಲ್ಲಿರುವ ಪಾಠಗಳನ್ನು ಕಿತ್ತು ಹಾಕುವುದರೊಂದಿಗೆ ಇವರ ಸರ್ಕಾರ ಶುರುವಾಯಿತು ಪಠ್ಯ ತೆಗೆಯುವ ವಿಚಾರ ಕ್ಯಾಬಿನೆಟ್ ಸಭೆಗೂ ತಗೊಂಡು ಹೋದರು. 20 ಪಾಠಗಳನ್ನು ತೆಗೆದು ಹಾಕಿದರು, ಶಿಕ್ಷಣ ಸಚಿವರು ಸ್ವತಂತ್ರ ಅಧಿಕಾರವಿಲ್ಲದೇ ಕೈಗೊಂಬೆ ಆಗಿದ್ದರು. ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿರೋದು ಆ ಪಕ್ಷದ ಚಾಣಕ್ಯರು, ಪಠ್ಯ ಪರಿಷ್ಕರಣೆ ಯಾವುದೇ ಶಾಲೆಯ ಮಕ್ಕಳವರೆಗೂ ತಲುಪಲೇ ಇಲ್ಲ. ಹೊಸ ಪಠ್ಯದ ಜೆರಾಕ್ಸ್ ಸಹ ಶಾಲೆ ಮಕ್ಕಳಿಗೆ ಕೊಡಲಿಲ್ಲ ಈ ಸರ್ಕಾರ ಎಂದು ದೂರಿದರು.
ಇನ್ನು ಮುಂದೆ ಹೋಗಿ ಎನ್‌ಇಪಿ ತೆಗೆಯಲು ಹೋದರು ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಟೆನ್ಶನ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಅತ್ಯಂತ ಕೆಟ್ಟದಾಗಿ ಶೈಕ್ಷಣಿಕ ನಿರ್ವಹಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಎಸ್ಎಸ್ಎಲ್ಸಿ, ಪಿಯುಸಿಗೆ ಮೂರು ಮೂರು ಪರೀಕ್ಷೆ ಮಾಡುವ ನಿರ್ಧಾರ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ, ಪಾಲಕರಿಗೆ ಎಷ್ಟು ಒತ್ತಡ ಆಗುತ್ತದೆ ಅಂತ ಇವರಿಗೆ ಗೊತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.