ಬೆಂಗಳೂರು:ಶೌಚಕ್ಕೆಂದು ಹೋದಾಗ ಐದು ವರ್ಷದ ಬಾಲಕನ ಮೇಲೆ ಗೂಡ್ಸ್ ವಾಹನ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ನಗರದ ಉರ್ವಶಿ ಚಿತ್ರಮಂದಿರ ಬಳಿ ಸಂಭವಿಸಿದೆ. ಐದು ವರ್ಷದ ಅಶ್ವಿತ (5) ಮೃತ ಬಾಲಕ.
ಕೃತ್ಯ ನಡೆದ ಸಮೀಪದಲ್ಲೇ ಬಾಲಕನ ಕುಟುಂಬ ವಾಸವಾಗಿತ್ತು. ತಂದೆ ಶಶಿಕುಮಾರ್ ಅಲ್ಯುಮಿನಿಯಂ ಪ್ಯಾಬಿಗ್ರೇಟರ್ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಶೌಚಾಲಯಕ್ಕಾಗಿ ಬಾಲಕ ಬಂದಿದ್ದ. ಈ ವೇಳೆ ರಾಜಸ್ಥಾನ ಮೂಲದ ಗೂಡ್ಸ್ ವಾಹನದ ಚಾಲಕ ಅದರ ಹಿಂದೆ ಬಾಕ ಇರುವುದನ್ನು ಗಮನಿಸದೆ, ಹಿಂಬದಿಗೆ ಹಾಕುವಾಗ ಚಕ್ರಕ್ಕೆ ಬಾಲಕ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.