ಬೆಂಗಳೂರು:ನಗರ ಸಶಸ್ತ್ರ ಮೀಸಲು ಪೊಲೀಸ್ (CAR) ಪಡೆಯ ಕೇಂದ್ರ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. 59.80 ಲಕ್ಷ ರೂ. ಹಣ ನಷ್ಟ ಮಾಡಲಾಗಿದೆ ಎಂದು ಈ ಹಿಂದಿನ ಎಸ್‌ಡಿಎ ಪ್ರಶಾಂತ್ ಡಿ. ಎಸ್. ಹಾಗೂ ಸಹಾಯಕ ಆಡಳಿತಧಿಕಾರಿ ಸರೋಜಾ ಬಿ. ವಿರುದ್ಧ ಪ್ರಸ್ತುತ ಸಿಎಆರ್‌ನ ಸಹಾಯಕ ಆಡಳಿತಧಿಕಾರಿ ಡಿ. ರಾಜಲಕ್ಷ್ಮಿ ಅವರು ನೀಡಿರುವ ದೂರಿನನ್ವಯ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು:2024ರ ಜನವರಿಯಲ್ಲಿ ನಡೆಸಲಾಗಿರುವ 2020ರಿಂದ 2022ರ ಅವಧಿಯ ನಡುವಿನ ಹಣದ ವ್ಯವಹಾರದ ಕುರಿತ ಲೆಕ್ಕಪತ್ರ ಪರಿಶೋಧನೆಯಲ್ಲಿ 59.80 ಲಕ್ಷ ರೂ. ಹಣದ ಕೊರತೆ ಕಂಡು ಬಂದಿದೆ. 'ಡಿಸಿಪಿ ಸಿಎಆರ್' ಅವರ ಹೆಸರಿನ ಬ್ಯಾಂಕ್ ಖಾತೆಗೆ ಹಾಕಿದ್ದ ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತದಲ್ಲಿ ಕೊರತೆಯಾಗಿದ್ದು, ಅನಧಿಕೃತ ವಹಿವಾಟು ನಡೆದ ಬಗ್ಗೆ ಮಹಾಲೇಖಪಾಲರು ವರದಿ ನೀಡಿದ್ದಾರೆ. ಆ ಅವಧಿಯಲ್ಲಿ ಸಹಾಯಕ ಆಡಳಿತಧಿಕಾರಿಯಾಗಿ ಸರೋಜಾ ಬಿ ಹಾಗೂ ನಗದು ಶಾಖೆಯ ವಿಶೇಷ ನಿರ್ವಾಹಕರಾಗಿ ಪ್ರಶಾಂತ್ ಡಿ. ಎಸ್. ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾನೂನು ಕ್ರಮಕ್ಕೆ ಆಗ್ರಹ:ಪ್ರಶಾಂತ್ ಅವರು ಮಂಡಿಸುವ ಕಡತಕ್ಕೆ ಅನುಮೋದನೆ ನೀಡುವ ಅಧಿಕಾರ ಸರೋಜಾ ಅವರದ್ದಾಗಿತ್ತು. ಸಿಎಆರ್ ಕೇಂದ್ರ ಘಟಕದ ಇಲಾಖಾ ವಹಿವಾಟಿನ ನಿರ್ವಹಣೆ ಅಧಿಕಾರ ಪ್ರಶಾಂತ್ ಅವರಿಗಿದ್ದು, ಅವರು ವರ್ಗಾವಣೆಯಾದ ನಂತರ ಆ ಸ್ಥಾನಕ್ಕೆ ಬಂದವರಿಗೆ ಚಾರ್ಜ್ ನೀಡಿಲ್ಲ. ಅಲ್ಲದೆ, ಅಕ್ರಮ ವಹಿವಾಟಿನ ಬಗ್ಗೆ ಸಹಾಯಕ ಆಡಳಿತಾಧಿಕಾರಿಯವರು ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಹಾಗೂ ಈ ಬಗ್ಗೆ ಇಲಾಖಾ ವಿಚಾರಣೆ ವೇಳೆ ಸೂಕ್ತ ಉತ್ತರ, ದಾಖಲೆಗಳನ್ನು ನೀಡಿರುವುದಿಲ್ಲ ಎಂದು ಆರೋಪಿಸಲಾಗಿದೆ. ಇಲಾಖೆಗೆ ವಂಚಿಸಿ ಸರ್ಕಾರಕ್ಕೆ 59.80 ಲಕ್ಷ ರೂ. ನಷ್ಟ ಮಾಡಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
2015ರಿಂದ ಸಹಾಯಕ ಆಡಳಿತ ಅಧಿಕಾರಿಯಾಗಿದ್ದ ಸರೋಜಾ ಬಿ. 2024ರ ಮೇ ತಿಂಗಳಿನಲ್ಲಿ ನಿವೃತ್ತಿಯಾಗಿದ್ದು, ಮತ್ತೋರ್ವ ಅಧಿಕಾರಿ ಪ್ರಶಾಂತ್ ಅವರು ಪ್ರಸ್ತುತ ಕರ್ತವ್ಯದಲ್ಲಿದ್ದಾರೆ. ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಷೇರುಪೇಟೆಯಲ್ಲಿ ಐದು ಪಟ್ಟು ಲಾಭಂಶ ಕೊಡಿಸುವ ಆಮಿಷ: ನಂಬಿ 46 ಲಕ್ಷ ರೂ ಕಳೆದುಕೊಂಡ ಮಂಗಳೂರಿಗ