ಚಿಕ್ಕೋಡಿ:ಕೃಷಿ ಹೊಂಡದಲ್ಲಿ ಈಜಲು ತೆರಳಿ ತಂದೆ ಹಾಗು ಇಬ್ಬರು ಮಕ್ಕಳು ಮುಳುಗಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಮೇತ್ರಿ ತೋಟದ ಕೃಷಿ ಹೊಂಡದಲ್ಲಿ ಇಂದು ಸಂಭವಿಸಿತು. ಕಲ್ಲಪ್ಪ ಬಸಪ್ಪ ಗಾಣಿಗೇರ (39), ಮನೋಜ್ ಕಲ್ಲಪ್ಪ ಗಾಣಿಗೇರ (11), ಮದನ ಕಲ್ಲಪ್ಪ ಗಾಣಿಗೇರ (9) ಮೃತರು ಎಂದು ಗುರುತಿಸಲಾಗಿದೆ.
ಕಲ್ಲಪ್ಪ ಬಸಪ್ಪ ಗಾಣಿಗೇರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಭಾನುವಾರವಾದ ಕಾರಣ ಶಾಲೆಗೆ ರಜೆ ಇತ್ತು. ಹೀಗಾಗಿ, ಅಪ್ಪ ಹಾಗು ಮಕ್ಕಳು ಮನೆಯಲ್ಲಿದ್ದರು. ಕಲ್ಲಪ್ಪ ತನ್ನ ಮಕ್ಕಳಿಗೆ ಈಜು ಕಲಿಸಬೇಕೆಂದು ತೀರ್ಮಾನಿಸಿ ಮಧ್ಯಾಹ್ನ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ.