ಬೆಂಗಳೂರು: ಆರ್.ಬಿ.ಐ ನಿಯಮ ಉಲ್ಲಂಘಿಸಿ ನಿಷೇಧಿತ ನೋಟುಗಳ ನಗದೀಕರಣ ಮಾಡಿದ್ದ ಆರೋಪದಡಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಡ್ಯಾಮ್ ರಸ್ತೆಯ ಎಸ್‌ಬಿಎಂ ಶಾಖೆಯ ಮಾಜಿ ಹೆಡ್ ಕ್ಯಾಶಿಯರ್ ಎಸ್. ಗೋಪಾಲಕೃಷ್ಣ, ಎಲ್ಐಸಿ ಏಜೆಂಟ್ ಕೆ. ರಾಘವೇಂದ್ರ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ, ಹಾಗೂ ಒಟ್ಟು 3,70,000/ ರೂ. ದಂಡ (A-1 ಆರೋಪಿಗೆ 2,10,000/- ರೂ. ಹಾಗೂ A-2 ಆರೋಪಿಗೆ 1,60,000/-) ವಿಧಿಸಿ ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ನೋಟ್ಬ್ಯಾನ್ ಸಂದರ್ಭದಲ್ಲಿ ನಿಷೇಧಿತ ಕರೆನ್ಸಿ ನೋಟುಗಳ ನಗದೀಕರಣಕ್ಕೆ ಆರ್ಬಿಐ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರ ಪ್ರಕಾರ ನೋಟು ನಗದೀಕರಣಕ್ಕೆ ಗುರುತಿನ ಪುರಾವೆ ಅಥವಾ ಕೆವೈಸಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈ ಯಾವುದೇ ಮಾರ್ಗಸೂಚಿ ಪಾಲಿಸದೇ ನೋಟು ನಗದೀಕರಣ ಮಾಡುತ್ತಿದ್ದ ಆರೋಪದಡಿ 2017ರ ಮಾರ್ಚ್ 30ರಂದು ಆರೋಪಿಗಳು ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.