ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಸಿಂಗಾಪುರದಲ್ಲಿರುವ ಆಲೆಮನೆಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಲಾಗುತ್ತಿದೆ. ಮಲ್ಲೇಶ ಹಾಲಣ್ಣನವರ್ ಎಂಬುವವರು 13 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿದ್ದ ಕಬ್ಬು ಅರೆಯಲು ಈ ಆಲೆಮನೆಯನ್ನ ಪ್ರಾರಂಭಿಸಿದ್ದರು.
ನಂತರ ಅಕ್ಕಪಕ್ಕದ ರೈತರು ತಾವು ಬೆಳೆದ ಕಬ್ಬನ್ನ ಈ ಆಲೆಮನೆಗೆ ತಂದು ಬೆಲ್ಲ ತಯಾರಿಸಿ ಮಾರಲಾರಂಭಿಸಿದ್ದರು. ಈ ಮಧ್ಯ ಆಲೆಮನೆಗೆ ಭೇಟಿಕೊಟ್ಟ ಕೆಲವರು ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಿ ಕೊಡುವಂತೆ ಮನವಿ ಮಾಡಿದ್ದರು. ಅದರಿಂದ ಉತ್ತೇಜಿತರಾದ ಮಲ್ಲೇಶ್ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಲಾರಂಭಿಸಿದ್ದಾರೆ.
ಆಲೆಮನೆ ಮಾಲೀಕ ಮಲ್ಲೇಶ್ ಹಾಲಣ್ಣನವರ್ ಮಾತನಾಡಿದರು (ETV Bharat) ಒಂದು ಕಡೆ ರಾಸಾಯನಿಕ ಬೆಲ್ಲ ಮತ್ತೊಂದು ಕಡೆ ರಾಸಾಯನಿಕ ಮುಕ್ತ ಬೆಲ್ಲವನ್ನ ಇಲ್ಲಿ ತಯಾರಿಸಲಾಗುತ್ತದೆ. ಇದರ ಜೊತೆಗೆ ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಪುಡಿ ಮಾಡಿ ಮಲ್ಲೇಶ್ ಮಾರಾಟ ಮಾಡುತ್ತಿದ್ದಾರೆ.
ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಹೇಗೆ?ಸಾವಯವ ಪದ್ಧತಿಯಲ್ಲಿ ಬೆಳೆದ ರಾಸಾಯನಿಕ ಮುಕ್ತ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಕಬ್ಬಿನ ರಸವನ್ನ ಬೆಂಕಿಯ ಮೇಲಿರುವ ಮೂರು ಕೊಪ್ಪರಿಗೆಗಳಲ್ಲಿ ಹಾಕಲಾಗುತ್ತದೆ. ನಂತರ ಕಬ್ಬಿನ ಹಾಲಿನಿಂದ ಕಲ್ಮಶ ತೆಗೆಯಲು ಬೆಂಡಿಗಿಡ ಬಳಸಲಾಗುತ್ತದೆ. ನಂತರ ಎರಡನೆಯ ಕೊಪ್ಪರಗಿಗೆ ಹಾಕಿ ಅದಕ್ಕೆ ಸುಣ್ಣದಪುಡಿ, ನಂತರ ಕೊಬ್ಬರಿ ಎಣ್ಣೆ ಹಾಕುವ ಮೂಲಕ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಲಾಗುತ್ತದೆ.
ಆಲೆಮನೆಯಲ್ಲಿ ಬೆಲ್ಲ ತಯಾರಿಸುತ್ತಿರುವುದು (ETV Bharat) ಈ ರೀತಿ ತಯಾರಿಸಿದ ಬೆಲ್ಲವನ್ನು ಒಂದು ಕೆಜಿ, 10 ಕೆಜಿಯ ಬಕೆಟ್ ಆಕಾರದ ಬೆಲ್ಲವನ್ನ ತಯಾರಿಸಲಾಗುತ್ತದೆ. ಅಲ್ಲದೆ ಪುಡಿ ಪುಡಿಯಾದ ಬೆಲ್ಲ ತಯಾರಿಸಿ ಅದನ್ನ ಪ್ಯಾಕೇಟ್‌ಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಈ ಪ್ಯಾಕೇಟ್ ಬೆಲ್ಲಕ್ಕೆ ಒಂದು ಕೆಜಿಗೆ 80 ರೂಪಾಯಿ ದರ ನಿಗದಿ ಮಾಡಲಾಗುತ್ತದೆ. ಸಾದಾ ಬೆಲ್ಲ ಕೆಜಿಗೆ 40 ರೂಪಾಯಿ ಬೆಲೆ ನಿಗದಿ ಮಾಡಿದರೆ, ರಾಸಾಯನಿಕ ಮುಕ್ತ ಬೆಲ್ಲಕ್ಕೆ 60 ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ.
ರಾಸಾಯನಿಕ ಮುಕ್ತ ಬೆಲ್ಲ (ETV Bharat) ಈ ಬಗ್ಗೆ ಆಲೆಮನೆ ಮಾಲೀಕ ಮಲ್ಲೇಶ್ ಮಾತನಾಡಿ, 'ಇತ್ತೀಚಿನ ದಿನಗಳಲ್ಲಿ ಜನರು ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ, ನಾವು ಕೆಮಿಕಲ್ ರಹಿತ ಬೆಲ್ಲವನ್ನ ಮಾಡಲು ಪ್ರಾರಂಭಿಸಿದ್ದೇವೆ. ಕೆಮಿಕಲ್ ಬೆಲ್ಲಕ್ಕೂ ಹಾಗೂ ಕೆಮಿಕಲ್ ರಹಿತ ಬೆಲ್ಲಕ್ಕೂ ಹಲವಾರು ವ್ಯತ್ಯಾಸಗಳಿವೆ. ಕೆಮಿಕಲ್ ಮುಕ್ತ ಬೆಲ್ಲದಿಂದ ಆರೋಗ್ಯಕ್ಕೆ ಹಾನಿಕಾರಕವಾಗುವುದಿಲ್ಲ. ಅದನ್ನ ತಯಾರಿಸಲು ಸ್ವಲ್ಪ ಕಷ್ಟವಾಗುತ್ತೆ. ಆದರೆ ಅದಕ್ಕೆ ತಕ್ಕಂತೆ ದರವನ್ನೂ ನಿಗದಿಪಡಿಸಿದ್ದೇವೆ. ದಿನವೊಂದಕ್ಕೆ 3 ರಿಂದ 4 ಕೆಜಿಯಷ್ಟೇ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾದಂತೆ ರಾಸಾಯನಿಕ ಮುಕ್ತ ಬೆಲ್ಲವನ್ನು ಹೆಚ್ಚಳಗೊಳಿಸುತ್ತೇವೆ' ಎಂದರು.
ಈ ಬಗ್ಗೆ ಮಲ್ಲೇಶ್ ತಂದೆ ಅಶೋಕ್ ಹಾಲಣ್ಣನವರ್ ಮಾತನಾಡಿ, 'ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಇದೆ. ಆದರೆ ಕಾರ್ಮಿಕರ ಸಮಸ್ಯೆ ಹೆಚ್ಚಿದೆ. ಅದಕ್ಕೆ ಬೆಲೆ ಜಾಸ್ತಿಯಾಗಿದೆ. ಈ ಬೆಲ್ಲ ಹಾವೇರಿ, ರಾಣೆಬೆನ್ನೂರು, ದಾವಣಗೆರೆ ಹಾಗೂ ಬೆಂಗಳೂರಿಗೆ ಹೋಗುತ್ತೆ. ಪೌಡರ್ ಮಾಡಿ ಕಳುಹಿಸುತ್ತೇವೆ. ಅದಕ್ಕೆ ಇದಕ್ಕಿಂತಲೂ ಜಾಸ್ತಿ ಖರ್ಚು ಬರುತ್ತೆ' ಎಂದು ಹೇಳಿದರು.
ಇದನ್ನೂ ಓದಿ :ಆಲೆಮನೆಗಳ ಮೊರೆ ಹೋದ ಕಬ್ಬು ಬೆಳೆಗಾರರು; ಇದೇ ಲಾಭದಾಯಕ ಅಂತಾರೆ ಹಾವೇರಿ ರೈತರು - ಆಲೆಮನೆ