ಬೆಂಗಳೂರು:ಬೀಗ ಹಾಕಿ ಮನೆ ಮುಂಭಾಗದಲ್ಲಿ ಕೀ ಇಡಬೇಡಿ ಎಂದು ಪೊಲೀಸರು ನಿರಂತರ ಜಾಗೃತಿ ಮೂಡಿಸಿದರೂ ಕೆಲವರು ಎಚ್ಚರ ವಹಿಸುತ್ತಿಲ್ಲ. ಮಾಲೀಕರೊಬ್ಬರ ನಿರ್ಲಕ್ಷ್ಯತನವನ್ನೇ ಬಂಡವಾಳ ಮಾಡಿಕೊಂಡ ಖದೀಮನೊಬ್ಬ ಮನೆ ಮುಂದಿಟ್ಟಿದ್ದ ಕೀ ಬಳಸಿಕೊಂಡು ಕಳ್ಳತನ ಮಾಡಿ, ಇದೀಗ ವೈಟ್ ಫೀಲ್ಡ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರದೀಪ್ ಬಂಧಿತ ಖದೀಮ. ಈತನಿಂದ 10 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯು ಕಂಪನಿಯೊಂದರ ಡೆಲಿವರಿ ಬಾಯ್ ಆಗಿ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಡೆಲಿವರಿ ಮಾಡಲು ಮನೆಗಳಿಗೆ ಹೋದಾಗ ಮಾಲೀಕರು ಮನೆ ಮುಂದೆ ಕೀ ಇಡುವ ಬಗ್ಗೆ ಅರಿತುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣ, ನಗದು ಕಳ್ಳತನ:ಇದೇ ರೀತಿ ಸೆಪ್ಟೆಂಬರ್ 27ರಂದು ಜ್ಯೂಸ್ ಅಂಗಡಿಗೆ ತೆರಳಲು ಮಾಲೀಕರು ಮನೆಯನ್ನು ಲಾಕ್ ಮಾಡಿ, ಕೀಯನ್ನು ಮನೆ ಹೊರಗಡೆಯ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಟ್ಟು ಹೋಗಿದ್ದರು. ಇದನ್ನು ಅರಿತ ಪ್ರದೀಪ್, ಬೀಗ ತೆಗೆದು ಮನೆಗೆ ನುಗ್ಗಿ ಬಿರುವಿನಲ್ಲಿದ್ದ 8 ಗ್ರಾಂ ಚಿನ್ನ ಹಾಗೂ 10 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.