ಕರ್ನಾಟಕ

karnataka

ETV Bharat / state

ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ವಿಚಾರಣೆಗೆ ವಿನಾಯಿತಿ ಕೋರಿದ್ದ ಮನವಿ ತಿರಸ್ಕರಿಸಿದ ಕೋರ್ಟ್ - PRAJWAL REVANNA

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲು ಕೋರಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಪ್ರಜ್ವಲ್ ರೇವಣ್ಣ, ಕೋರ್ಟ್
ಪ್ರಜ್ವಲ್ ರೇವಣ್ಣ, ಕೋರ್ಟ್ (ETV Bharat)

By ETV Bharat Karnataka Team

Published : Jan 13, 2025, 10:21 PM IST

ಬೆಂಗಳೂರು: ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣಾ ಪ್ರಕ್ರಿಯೆಗೆ ಖುದ್ದು ಹಾಜರಿಗೆ ಬದಲಾಗಿ ವಿಡಿಯೋ ಕಾನ್ಪೆರೆನ್ಸ್ ಮೂಲಕ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಪ್ರಜ್ವಲ್ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಸೆಷನ್ಸ್ ನ್ಯಾಯಾಲಯಕ್ಕೆ ಪ್ರಜ್ವಲ್ ಪರ ವಕೀಲರು ಸೋಮವಾರ ಮನವಿ ಮಾಡಿದರು.

ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಆರ್ (ಕಾಲ್ ಡೀಟೆಲ್ಸ್ ರೆಕಾರ್ಡ್) ಅನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದೂ ಪೀಠಕ್ಕೆ ವಿವರಿಸಿದರು.
ಈ ವೇಳೆ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ತಕ್ಷಣ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದರು.

ಆರೋಪಿ ಕೋರ್ಟ್‌ಗೆ ಖುದ್ದು ಹಾಜರಾಗುವುದಕ್ಕೆ ವಿನಾಯತಿ ನೀಡಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡಬಾರದು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿ ಆದೇಶಿಸಿದರು.

ಪ್ರಕರಣದ ಹಿನ್ನೆಲೆ:ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೋಗಳ ಹಂಚಿಕೆ ಆರೋಪದ ಮೇಲೆಯೂ ಪ್ರಜ್ವಲ್ ವಿರುದ್ಧ ಪ್ರತ್ಯೇಕವಾಗಿ ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್​ ರೇವಣ್ಣ ವಿರುದ್ಧ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಆದೇಶ

ಇದನ್ನೂ ಓದಿ: ಒಬ್ಬ ವ್ಯಕ್ತಿಯೇ ಆರ್‌ಟಿಐ ಅಡಿ ಸಲ್ಲಿಸಿದ್ದ 9 ಸಾವಿರಕ್ಕೂ ಹೆಚ್ಚು ಅರ್ಜಿ ವಜಾ; ₹9.6 ಲಕ್ಷ ಶುಲ್ಕ ಪಾವತಿಗೆ ಹೈಕೋರ್ಟ್​ ಆದೇಶ

ABOUT THE AUTHOR

...view details