ಬೆಂಗಳೂರು:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಕೆ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ರೌಡಿಶೀಟರ್ ಸೋಮಶೇಖರ್, ಜೋಸೆಫ್ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಸಂದೇಶ ಕಳುಹಿಸಿರುವ ಕುರಿತು ಜೈಲಿನ ಅಧೀಕ್ಷಕರ ವಿರುದ್ಧವೇ ತನಿಖೆ ನಡೆಸುವಂತೆ ಕಾರಾಗೃಹ ಐಜಿಪಿಗೆ ಕೋರ್ಟ್ ಆದೇಶ ಹೊರಡಿಸಿದೆ.
2021ರಲ್ಲಿ ಕೋರಮಂಗಲದಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲು ಕೊಲೆಯಲ್ಲಿ ಬಂಧನಕ್ಕೊಳಗಾಗಿರುವ ರೌಡಿ ಸೋಮಶೇಖರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆಟೋ ಚಾಲಕನಾಗಿರುವ ಆರ್ಮುಗಂ ಇನ್‌ಸ್ಟಾಗ್ರಾಂ ಖಾತೆಯ ಮೆಸೆಂಜರ್‌ಗೆ ಸೆಪ್ಟೆಂಬರ್ 22ರಂದು ಸಲಗ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೆಸೇಜ್ ಕಳುಹಿಸಿದ್ದ. ಬಬ್ಲು ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಬಾರದು. ಸಾಕ್ಷ್ಯ ನುಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಜೋಸೆಫ್ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಎಚ್ 67ನೇ ಕೋರ್ಟ್‌ಗೆ ಆರೋಪಿಯಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ವಿಚಾರವನ್ನು ಪೊಲೀಸರು ತಿಳಿಸಿದ್ದರು.
ಪ್ರಕರಣದ ಮಾಹಿತಿ ಪಡೆದಿರುವ ನ್ಯಾಯಾಲಯ, ''ಜೈಲಿನಲ್ಲಿರುವ ಆರೋಪಿ ಮೊಬೈಲ್ ಪಡೆದಿರುವುದರ ಹಿಂದೆ ಜೈಲು ಅಧೀಕ್ಷಕರ ವೈಫಲ್ಯ ಕಾರಣ. ಈ ನಿಟ್ಟಿನಲ್ಲಿ ಆರೋಪಿ ಸೋಮಶೇಖರ್‌ಗೆ ಮೊಬೈಲ್ ಸಿಕ್ಕಿದ್ದು ಹೇಗೆ? ಎಂಬ ವಿಚಾರವೂ ಸೇರಿ ಜೈಲು ಅಧೀಕ್ಷಕರ ವಿರುದ್ಧ ಐಜಿಪಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ, ಪ್ರಕರಣದ ವಿಚಾರಣೆ ಅಂತ್ಯವಾಗುವವರೆಗೂ ಸಾಕ್ಷಿದಾರರಿಗೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೋರಮಂಗಲ ಪೊಲೀಸರು ರಕ್ಷಣೆ ನೀಡಬೇಕು'' ಎಂದು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು, ರೌಡಿಶೀಟರ್ ಸೋಮಶೇಖರ್‌ನನ್ನು ವಶಕ್ಕೆ ಪಡೆಯಲು ಸಿದ್ದತೆ ನಡೆಸಿದ್ದು, ಬಾಡಿ ವಾರಂಟ್ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.
2021ರ ಜುಲೈ 19ರಂದು ಕೋರಮಂಗಲದ 8ನೇ ಬ್ಲಾಕ್ನ ಖಾಸಗಿ ಬ್ಯಾಂಕ್‌ನಲ್ಲಿ ದುಷ್ಕರ್ಮಿಗಳ ತಂಡ, ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲಿಯನ್ನು ಪತ್ನಿ ಹಾಗೂ ಮಗಳ ಎದುರಿನಲ್ಲೇ ಬರ್ಬರವಾಗಿ ಹತ್ಯೆ ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ರೌಡಿಶೀಟರ್ ಸೋಮಶೇಖರ್ ಸೇರಿ ಹಲವು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಆರೋಪಿ ಜೈಲಿನಲ್ಲಿದ್ದು, ಪ್ರಕರಣದ ಸಾಕ್ಷಿದಾರಳಾಗಿರುವ ಜೋಸೆಫ್ ಪತ್ನಿ ಜೆನ್ನಿಫರ್‌ಗೂ ಅಪರಿಚಿತರು ಬೆದರಿಕೆ ಒಡ್ಡಿದ್ದರು.
ಇದನ್ನೂ ಓದಿ:ಸರ್ಕಾರಿ, ಖಾಸಗಿ ವಿವಿಗಳಲ್ಲಿ ಮಾನಸಿಕ ಆರೋಗ್ಯ ನೀತಿ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸಲು ಹೈಕೋರ್ಟ್ ಸೂಚನೆ